ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂತ್ಯಸಂಸ್ಕಾರಕ್ಕೆ ಬಂದವರು ಪೆಟ್ಟು ತಿಂದರು!

Rashmi Kasaragodu
Updated On : 22 Oct 2013, 11:19 am

ಮಂಗಳೂರು:  ಅಂತ್ಯಸಂಸ್ಕಾರಕ್ಕೆ ಬಂದವರ ವಾಹನ ನಿಲುಗಡೆ ವಿಚಾರದಲ್ಲಿ ಎರಡು ಕೋಮಿನವರ ನಡುವೆ ನಡೆದ ಮಾತಿನ ಚಕಮಕಿ ಘರ್ಷಣೆಗೆ ತಿರುಗಿ ಐದು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಮಲ್ಲೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆ ಸಂದರ್ಭ ಹಲವು ವಾಹನಗಳನ್ನು ಪುಡಿಮಾಡಿ ಹಾನಿ ಉಂಟು ಮಾಡಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಕುಂಞಪ್ಪ, ಉಮಾವತಿ, ಸಾಕೇತ್, ಶರಣ್ ಹಾಗೂ ಲತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಸೋಮವಾರ ಮಲ್ಲೂರು ಬಳಿ ವ್ಯಕ್ತಿಯೊಬ್ಬರು ನಿಧನರಾಗಿದ್ದರು. ಅವರ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರಕ್ಕೆಂದು ಹಲವರು ಬಂದಿದ್ದರು.
ಮನೆಗೆ ಬರುವ ವೇಳೆ ವಾಹನಗಳನ್ನು ಮೃತರ ಮನೆ ಅಕ್ಕಪಕ್ಕ ನಿಲ್ಲಿಸಿದ್ದರು. ಈ ಭಾಗದಲ್ಲಿ ಒಂದೇ ಸಮುದಾಯಕ್ಕೆ ಸೇರಿದವರು ವಾಸಿಸುತ್ತಿದ್ದು, ಅಂತ್ಯಸಂಸ್ಕಾರಕ್ಕೆ ಬಂದವರ ವಾಹನ ಅನ್ಯ ಕೋಮಿನವರಿಗೆ ಸೇರಿದ ಪ್ರದೇಶದಲ್ಲಿ ನಿಲುಗಡೆಯಾಗಿತ್ತು.
ಅಂತ್ಯಸಂಸ್ಕಾರ ಮುಗಿಸಿದ ಮಂದಿ ವಾಪಸ್ ಬರುವಾಗ ಅಲ್ಲಿ ನಿಲ್ಲಿಸಲಾಗಿದ್ದ ಬೈಕೊಂದರ ಚಕ್ರದ ಗಾಳಿ ತೆಗೆದು ಕನ್ನಡಿ ತಿರುಗಿಸಿ, ಸೈಲೆನ್ಸರ್‌ಗೆ ಕಲ್ಲು ತುಂಬಿ ಇರಿಸಲಾಗಿತ್ತು. ಇದನ್ನು ವಾಹನ ಮಾಲೀಕರು ಅಲ್ಲಿದ್ದ ಅನ್ಯ ಕೋಮಿನ ಯುವಕರಲ್ಲಿ ಪ್ರಶ್ನಿಸಿದ್ದರು. ಈ ಸಂದರ್ಭ ಬೈಕ್ ಸವಾರ ಹಾಗೂ ಅಲ್ಲಿನ ಯುವಕರಿಗೂ ಮಾತುಕತೆಯಾಗಿ ಹಲ್ಲೆಯೂ ನಡೆಯಿತು. ಇದಾದ ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಇರಿಸಿದ್ದ ಎಲ್ಲಾ ವಾಹನಗಳನ್ನು ದುಷ್ಕರ್ಮಿಗಳು ಪುಡಿಗಟ್ಟಿದ್ದಾರೆ. ಮಲ್ಲೂರಿನಲ್ಲಿದ್ದ ಇನ್ನೊಂದು ಕೋಮಿನ ವ್ಯಕ್ತಿಗೆ ಸೇರಿದ ರಿಕ್ಷಾಗೆ ಹೊಡೆದು ಚಾಲಕಗೂ ಏಟು ನೀಡಿದ್ದಾರೆ. ಈ ಘರ್ಷಣೆ ವೇಳೆ ಐವರು ಗಾಯಗೊಂಡಿದ್ದಾರೆ.
ಮನೆಗೆ ನುಗ್ಗಿ ಹಲ್ಲೆ:  ಬೈಕ್‌ಗೆ ಹಾನಿಯಾಗಿದ್ದನ್ನು ಪ್ರಶ್ನಿಸಿದ ಯುವಕನ ಮನೆಗೆ ಘರ್ಷಣೆಯ ಸ್ವಲ್ಪ ಸಮಯದ ಬಳಿಕ ನುಗ್ಗಿದ ದುಷ್ಕರ್ಮಿಗಳ ಗುಂಪು ಮಹಿಳೆಯರ ಮೇಲೂ ಕೈಮಾಡಿದ್ದು ಮನೆಯಲ್ಲಿದ್ದ ಪುರುಷರಿಗೂ ತೀವ್ರ ಹಲ್ಲೆ ನಡೆಸಿದೆ.
ಘಟನಾ ಸ್ಥಳದಲ್ಲಿ ಸೋಮವಾರ ರಾತ್ರಿ ಉದ್ವಿಗ್ನತೆ ನೆಲೆಸಿತ್ತು. ಮಂಗಳೂರು ಗ್ರಾಮಾಂತರ ಪೊಲೀಸರು ಮನೆಗೆ ನುಗ್ಗಿ ನಡೆಸಿದ ಹಲ್ಲೆ ಕುರಿತು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಯುವತಿಯೊಬ್ಬಳು ಹಲ್ಲೆ ಮಾಡಿದ ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದುಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement