ಕಾಡು ಹಂದಿ ಕಚ್ಚಿ ವ್ಯಕ್ತಿಗೆ ಗಾಯ
ಸುಬ್ರಹ್ಮಣ್ಯ: ಕೊಲ್ಲಮೊಗ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಬಾಳ ಎಂಬಲ್ಲಿ ಶೀನಪ್ಪ ಕಡಂಬಾಳ ಎಂಬವರಿಗೆ ಕಾಡು ಹಂದಿ ಕಚ್ಚಿ ತೀವ್ರ ಗಾಯಗೊಳಿಸಿರುವ ಘಟನೆ ಸೋಮವಾರ ನಡೆದಿದೆ.
ಶೀನಪ್ಪ ಗೌಡರು ಬೆಳಗ್ಗೆ ಪಕ್ಕದ ಮನೆಯ ಆನಂದ ದೋಳ್ತಿಲ ಎಂಬವರ ಜೊತೆ ಕೆಲಸಕ್ಕೆಂದು ಮನೆಯಿಂದ ಹೊರಟು ತನ್ನ ತೋಟದ ಮೂಲಕ ಕಾಡಿನಂಚಿನ ದಾರಿಯಲ್ಲಿ ಜೊತೆಯಾಗಿ ಸಾಗುತ್ತಿದಾಗ ಕಾಡಿನಲ್ಲಿದ್ದ ಕಾಡು ಹಂದಿ ಇವರ ಮೇಲೆ ಎರಗಿದೆ. ಶೀನಪ್ಪ ಎಂಬವರ ಮೇಲೆ ದಾಳಿ ನಡೆಸಿದ್ದರಿಂದ ತೀವ್ರ ಗಾಯಗಳಾಗಿದೆ
ಇವರೊಂದಿಗಿದ್ದ ಆನಂದ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯಲಾಗಿದೆ.
ಕಾಡುಹಂದಿಗೆ ಯಾರೋ ಬೇಟೆಗಾರರು ಗಾಯಗೊಳಿಸಿದ್ದರಿಂದ ಪೆಟ್ಟಾಗಿದ್ದ ಹಂದಿ ಸಿಟ್ಟಿನಿಂದ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.