ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೇವಲ ಅಲ್ಪಸಂಖ್ಯಾತ ಮತಗಳಿಂದ ಕಾಂಗ್ರೆಸ್ ಗೆದ್ದಿಲ್ಲ: ಯು.ಟಿ.ಖಾದರ್

Rashmi Kasaragodu
Updated On : 22 Oct 2013, 11:15 am

ಮಂಗಳೂರು: ಪಿಲಿಕುಲ ಸ್ಕೌಟ್ ಭವನದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಕುರಿತ ವಿಚಾರದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಮಾಜಿ ಮೇಯರ್ ಆಶ್ರಫ್ ಪರೋಕ್ಷ ವಾಗ್ಬಾಣಗಳ ವಿನಿಮಯ ಮಾಡಿಕೊಂಡರು !
 ಮಂಗಳೂರು ಮಾಜಿ ಮೇಯರ್ ಅಶ್ರಫ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕವೂ ಅಲ್ಪಸಂಖ್ಯಾತರ ಸಮಸ್ಯೆ ಕಡಿಮೆಯಾಗಿಲ್ಲ. ಗೋ ಸಾಗಣೆ ಪರವಾನಗಿ ಇದ್ದರೂ ದಾಳಿಗಳು ನಡೆಯುತ್ತಿವೆ. ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧವೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಭೆ ಕೂಡಾ ಕರೆದಿದ್ದೇವೆ ಎಂದು ಗುಡುಗಿದರು.
 ಇದರಿಂದ ವಿಚಲಿತರಾದ ಜಿ. ಪರಮೇಶ್ವರ್, ನೀವೆಲ್ಲ ಈ ರೀತಿ ಮಾಡಬಾರದು. ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ, ನಿಮ್ಮ ದೂರುಗಳನ್ನು ಪರಿಶೀಲನೆ ಮಾಡುವ ಎಂದರು. ಜಿಲ್ಲೆಯಲ್ಲಿ ಮೂವರು ಸಚಿವರಿದ್ದಾರೆ. ದಯವಿಟ್ಟು ಕುಳಿತುಕೊಳ್ಳಿ ಎಂದು ಆಶ್ರಫ್ ಅವರನ್ನು ಅಧ್ಯಕ್ಷರು ಕುಳ್ಳಿರಿಸಿದರು.
 ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್, ಅಲ್ಪಸಂಖ್ಯಾತರಿಗೆ ತೊಂದರೆ ಆಗಿದ್ದರೆ ನಿರ್ದಿಷ್ಟ ಪ್ರಕರಣಗಳನ್ನು ತಿಳಿಸಿ. ಈ ಬಗ್ಗೆ ಪೊಲೀಸರ, ಅಧಿಕಾರಿಗಳ ಜತೆ ಮಾತನಾಡಿ ಪರಿಹರಿಸೋಣ. ಇದನ್ನು ಬಿಟ್ಟು ಪ್ರತಿಭಟನೆ ಹೆಸರಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು ಸರಿ ಅಲ್ಲ ಎಂದರು.
 ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತಗಳಿಂದ ಗೆದ್ದಿಲ್ಲ. ಉಳ್ಳಾಲದಲ್ಲಿ ತನಗೆ ಅಷ್ಟು ಬಹುಮತ ಬಂದಿದೆ. ಬಹುಸಂಖ್ಯಾತರು ಮತ ಹಾಕದೆ ಇದು ಸಾಧ್ಯವಿಲ್ಲ. ಅಶ್ರಫ್ ಅವರ ಬ್ಲಾಕ್‌ನಲ್ಲಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕಡೆ ಸೋತಿದೆ. ಲೋಕಸಭೆ ಚುನಾವಣೆಯಲ್ಲಿ ಕಳೆದಬಾರಿ ಕ್ಷೇತ್ರ ಕಳೆದುಕೊಂಡರೂ ಮಂಗಳೂರಲ್ಲಿ ಮುನ್ನಡೆ ಸಾಧಿಸಿದ್ದೆವು ಎಂದು ವಿಶ್ಲೇಷಿಸಿದರು.
 ಲೋಕಸಭೆ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಬಿ.ಜನಾರ್ದನ ಪೂಜಾರಿ ಮಾತನಾಡಿ, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ವಿಚಾರ ಗಮನದಲ್ಲಿಡಬೇಕು. ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ, ಸುಳ್ಯ, ಪುತ್ತೂರು ತಮಿಳರ ಜಾತಿ ಸರ್ಟಿಫಿಕೆಟ್ ಶೀಘ್ರ ಒದಗಿಸುವ ಬಗ್ಗೆ ಸರ್ಕಾರ ಮನ ಮಾಡಬೇಕು. ಪ್ರಣಾಳಿಕೆಯಲ್ಲಿರುವ ಭರವಸೆ ಹಂತವಾಗಿ ಶೀಘ್ರ ಈಡೇರಿಸಬೇಕು ಎಂದರು. ಕೆಪಿಸಿಸಿ ಮಾಜಿ ವಕ್ತಾರ ಕಳ್ಳಿಗೆ ತಾರಾನಾಥ ಶೆಟ್ಟಿ ಮಾತನಾಡಿ, ಚುನಾವಣೆ ಸಂದರ್ಭ ಬಿಜೆಪಿಯವರು ಸಂಕಟ ಬಂದಾಗ ವೆಂಕಟರಮಣ ಎಂಬಂತೆ ತನ್ನ ದಾಳಗಳನ್ನು ಎಸೆಯುತ್ತಾರೆ. ಕೋಮು ಪ್ರಚೋದನೆ, ದಾಳಿಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು, ಗೂಂಡಾ ಕಾಯ್ದೆ ಹಾಕಬೇಕು. ಹಿಂಜರಿದರೆ ಅಧಿಕಾರಿಗಳನ್ನು ಹೊಣೆ ಮಾಡಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement