ತುಂಬೆಯಲ್ಲಿ ಹೋಮಿಯೋಪಥಿ ಹೊರರೋಗಿ ಘಟಕ ಉದ್ಘಾಟನೆ
ಬಂಟ್ವಾಳ: ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆ ಕೇತ್ರದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ತನ್ನದೇ ಆದ ಛಾಪು ಮೂಡಿಸಿದೆ ಎಂದು ದ.ಕ. ಜಿಲ್ಲಾ ಆಯುಷ್ ವಿಭಾಗದ ಆಯುಷ್ ಅಧಿಕಾರಿ ಡಾ.ಸದಾಶಿವಾನಂದ ಹೇಳಿದ್ದಾರೆ. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೋಮಿಯೋಪಥಿ ಹೊರರೋಗಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಸಂಸ್ಥೆ ಉತ್ತಮ ಸೇವೆ ನೀಡುತ್ತ ಬಂದಿದೆ. ರೋಗ ಬಾರದಂತೆ ತಡೆಯುವ ಶಕ್ತಿ ಹೋಮಿಯೋಪತಿಯಲ್ಲಿದೆ, ಇದು ಆಯುಷ್‌ಗೆ ಹೆಮ್ಮೆ. ಚಿಕೂನ್‌ಗುನ್ಯ ಬಂದ ಸಮಯದಲ್ಲಿ ಸುಮಾರು 1 ಲಕ್ಷ ಜನರಿಗೆ ಹೋಮಿಯೋಪತಿ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಕಂಕನಾಡಿ ಫಾದರ್ ಮುಲ್ಲರ್ ಸೇವಾ ಸಂಸ್ಥೆ ನಿರ್ದೇಶಕ ರೆ.ಫಾ. ಪ್ಯಾಟ್ರಿಕ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ತುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ವಲವೂರು ಮುಖ್ಯ ಅತಿಥಿಯಾಗಿದ್ದರು. ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ವಿನ್ಸೆಂಟ್ ಸಲ್ದಾನ್ಹ ಸ್ವಾಗತಿಸಿದರು. ಆಸ್ಪತ್ರೆಯ ಡಾ. ಶಿವಪ್ರಸಾದ್ ಕೆ. ವಂದಿಸಿದರು. ಡಾ. ಪ್ರಜ್ಞಾ ಮತ್ತು ಡಾ. ಧನ್ಯ ನಿರೂಪಿಸಿದರು.