ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದೋಣಿಯಿಂದ ಬಿದ್ದು ಸಾವು

Rashmi Kasaragodu
Updated On : 22 Oct 2013, 11:19 am

ಮಂಗಳೂರು: ಪಲ್ಗುಣಿ ನದಿಯಲ್ಲಿ ಮರಳು ತೆಗೆಯುತ್ತಿದ್ದ ವೇಳೆ ಮೀನುಗಾರ ಬ್ರಿಜ್‌ಮೋಹನ್‌ದಾಸ್ ಯಾದವ್ (58) ದೋಣಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ದಾಸ್ ಮರಳು ತೆಗೆದು ಬರುತ್ತಿದ್ದ ವೇಳೆ ದೋಣಿ ಹುಟ್ಟು ಕೆಸರೊಳಗೆ ಸಿಲುಕಿಕೊಂಡಿತು. ಆಗ ದೋಣಿ ಮುಂದೆ ಚಲಿಸಿದ್ದು, ಆಯತಪ್ಪಿ ನೀರಿಗೆ ಬಿದ್ದರು.
ಸಿಎ ಬ್ಯಾಂಕಿಗೆ ಕಲ್ಲೆಸೆದು ಹಾನಿ
ಉಪ್ಪಿನಂಗಡಿ: ಇಲ್ಲಿನ ಸಿಎ ಬ್ಯಾಂಕಿನ ಸಂಗಮಕೃಪಾ ಸಭಾ ಭವನದ ಗಾಜಿನ ಕಿಟಕಿಗಳಿಗೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಪಡಿಸಿದ ಘಟನೆ ಸಂಭವಿಸಿದೆ.ಸೋಮವಾರ ಗಮನಕ್ಕೆ ಬಂದಿರುವ ಈ ಕೃತ್ಯದಲ್ಲಿ ಸಭಾಂಗಣದ ಒಂದು ಪಾರ್ಶ್ವದ ಗಾಜಿನ ಕಿಟಕಿಗಳನ್ನು ಕಲ್ಲೆಸೆದು ಹಾನಿಗೊಳಪಡಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿ ಯಾರನ್ನೂ ಹೆಸರಿಸದಿದ್ದರೂ ಪ್ರಕರಣವನ್ನು ಪೊಲೀಸರ ಗಮನಕ್ಕೆ ತರಲಾಗಿದೆ.  
ತಂದೆ, ಮಗನಿಗೆ ಇಬ್ಬರಿಂದ ಹಲ್ಲೆ: ದೂರು
ವಿಟ್ಲ: ತಂದೆ ಮತ್ತು ಮಗನಿಗೆ ಇಬ್ಬರ ತಂಡ ಮರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ನೆಕ್ಕರೆಕಾಡಿನಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಆನಂದ ನಾಯ್ಕ(52) ಅವರ ಮನೆಗೆ ಬಂದ ನಾರಾಯಣ ಮತ್ತು ವಿಶ್ವನಾಥ ಎಂಬವರು ಕಲ್ಲು ಮತ್ತು ದೊಣ್ಣೆ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ನಂತರ ಆನಂದ ಅವರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಅವರ ಮಗ ಮೋಹನನಿಗೂ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ದಾರಿಯ ವಿಚಾರವೇ ಜಗಳಕ್ಕೆ ಕಾರಣವೆನ್ನಲಾಗಿದೆ. ಗಾಯಗೊಂಡ ಅವರಿಬ್ಬರೂ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಯಲ್ಲಿ ಅಪರಿಚಿತ ಮೃತದೇಹ ಪತ್ತೆ
ಉಡುಪಿ: ಗಂಗೊಳ್ಳಿಯ ಹೊಸಾಡು ಗ್ರಾಮದ ಕುಂಬಾರ ಮಕ್ಕಿ ಎಂಬಲ್ಲಿ ಸೌಪರ್ಣಿಕ ನದಿಯಲ್ಲಿ ಅವರಿಚಿತ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ನಿವಾಸಿ ಲೋಕೇಶ್ ಪೂಜಾರಿ ತಮ್ಮ ಮನೆಯ ಬಳಿ ನದಿಯಲ್ಲಿ ಈ ಶವವನ್ನು ನೋಡಿದ್ದು, ಮೃತ ವ್ಯಕ್ತಿಯು ಸುಮಾರು 50-55 ವರ್ಷದವರಾಗಿದ್ದು, ತೆಳ್ಳನೆ ಶರೀರ ಹೊಂದಿದ್ದು, ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮುಳುಗಿ ಆಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟು ನದಿ ನೀರಿನಲ್ಲಿ ತೇಲಿ ಬಂದಿದ್ದು ಎಂದು ನೀಡಿರುವ ಹೇಳಿಕೆಯಂತೆ ಗಂಗೊಳ್ಳಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಬಾವಿಗೆ ಬಿದ್ದು ವ್ಯಕ್ತಿ ಸಾವು
ಕುಂದಾಪುರ: ಇಲ್ಲಿನ ಕೆಂಚನೂರು ಗ್ರಾಮದಲ್ಲಿ ವ್ಯಕ್ತಿಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಶಿವ ಪೂಜಾರಿ (50) ಮೃತರು. ಅವರು ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಹೋಗಿದ್ದವರು, ಕತ್ತಲಲ್ಲಿ ಕಾಣದೆ ಮನೆಯ ಹಿಂಭಾಗದಲ್ಲಿರುವ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರ ಪ್ರಕಾಶ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement