ಬಸ್-ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಬಂಟ್ವಾಳ: ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪ ಪೊರ್ಲಿಪ್ಪಾಡಿ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಶಿವಮೊಗ್ಗದ ಜಾನ್ ಜೊಸ್ಸಿ ಸಿಕ್ವೇರಾ (32) ಹಾಗೂ ಕಕ್ಯಪದವಿನ ಲವೀನಾ (28) ಮೃತರು. ಬಸ್ ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬಸ್ ಹಾಗೂ ಪುತ್ತೂರು ಕಡೆಯಿಂದ ಕಲ್ಲಡ್ಕದತ್ತ ತೆರಳುತ್ತಿದ್ದ ಸ್ಯಾಂಟ್ರೋ ಕಾರು ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರು ಓವರ್ಟೇಕ್ ಮಾಡುವ ಭರದಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮದುವೆಗೆ ಹೊರಟವರು ಮಸಣಕ್ಕೆ: ಮೃತ ಜಾನ್ ಜೊಸ್ಸಿ ಸಿಕ್ವೇರಾ ಶಿವಮೊಗ್ಗದ ಚರ್ಚ್ನಲ್ಲಿ ಧರ್ಮಗುರು. ಕಕ್ಯಪದವಿನ ವಿನ್ಸೆಂಟ್ ಡಿಸೋಜ ಎಂಬವರ ಪುತ್ರಿ ಲವೀನಾ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಇವರಿಬ್ಬರು ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಶಿವಮೊಗ್ಗದಿಂದ ಹೊರಟು ಕಲ್ಲಡ್ಕದ ಅಮ್ಟೂರು ಚರ್ಚ್ನಲ್ಲಿ ನಡೆಯಲಿರುವ ತಮ್ಮ ಕುಟುಂಬಸ್ಥರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದರು ಎನ್ನಲಾಗಿದೆ. ಪುತ್ತೂರು ರಸ್ತೆಯಾಗಿ ಕಲ್ಲಡ್ಕದತ್ತ ತೆರಳುತ್ತಿದ್ದಾಗ ಕಲ್ಲಡ್ಕದ ಅಪಾಯಕಾರಿ ರಸ್ತೆಯೆಂದೇ ಗುರುತಿಸಲ್ಪಟ್ಟ ಪೊರ್ಲಿಪ್ಪಾಡಿಯಲ್ಲಿ ಅಪಘಾತ ಸಂಭವಿಸಿದೆ.
ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಿಂದ ಮೃತದೇಹ ಹೊರತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಫಾ. ಜೋನ್ ಜೊಸ್ಸಿ ಮೂಲತಃ ಉಪ್ಪಿನಂಗಡಿಯವರಾಗಿದ್ದು, ಎರಡು ವರ್ಷ ಸಾಗರದ ಸೈಂಟ್ ಜೋಸೆಫ್ ಚರ್ಚ್ನಲ್ಲಿ ಸಹಾಯಕ ಧರ್ಮಗುರುವಾಗಿದ್ದರು. ಕಳೆದ ಎರಡು ವರ್ಷದಿಂದ ಅವರು ಶಿವಮೊಗ್ಗದ ಬಿಷಪ್ ಹೌಸ್ನಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಧರ್ಮಗುರುಗಳಾಗಿ ಶಿವಮೊಗ್ಗದಲ್ಲಿ ಜನಮನ್ನಣೆ ಪಡೆದಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಲವೀನಾ, ಫಾ. ಜೊಸ್ಸಿ ಅವರ ಸಹೋದರಿಯ ಪುತ್ರಿ.
ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಅಪಾಯಕಾರಿ ರಸ್ತೆ
ಮಂಗಳೂರು- ಬೆಂಗಳೂರು ಹೆದ್ದಾರಿಯ ಕಲ್ಲಡ್ಕದ ಪೊರ್ಲಿಪ್ಪಾಡಿಯಲ್ಲಿ ತಿರುವುಗಳಿಲ್ಲವಾದರೂ ಅನೇಕ ಬಾರಿ ಇಲ್ಲಿ ದುರ್ಘಟನೆಗಳು ಸಂಭವಿಸಿವೆ. ನೇರ ರಸ್ತೆಯಾಗಿರುವ ಕಾರಣ ವಾಹನ ಚಾಲಕರು ವೇಗವಾಗಿ ಸಾಗುವುದು ಮತ್ತು ಓವರ್ಟೇಕ್ ಮಾಡುವುದು ಇಲ್ಲಿ ಸಾಮಾನ್ಯ. ಹೆದ್ದಾರಿ ಬದಿಯಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದು ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.