ಮೆಸ್ಕಾಂ ಅಪರಾಧ ಪತ್ತೆದಳ ಎಸ್ಪಿ ಹರಿಶ್ಚಂದ್ರ ಅಧಿಕಾರ ಸ್ವೀಕಾರ
ಮಂಗಳೂರು: ಡಿವೈಎಸ್ಪಿ ಹುದ್ದೆಯಿಂದ ಪದೋನ್ನತಿ ಹೊಂದಿ ಮೆಸ್ಕಾಂ ಅಪರಾಧ ಪತ್ತೆ ದಳದ ಎಸ್ಪಿಯಾಗಿ ಪಿ.ಹರಿಶ್ಚಂದ್ರ ಸೋಮವಾರ ಅಧಿಕಾರ ಸ್ವೀಕರಿಸಿದರು. ಮೆಸ್ಕಾಂ ಡಿವೈಎಸ್ಪಿ ವಿನಯ ಗಾಂವ್ಕರ್ ಅಧಿಕಾರ ಹಸ್ತಾಂತರಿಸಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆಸ್ಕಾಂ ಅಪರಾಧ ಪತ್ತೆದಳದಲ್ಲಿ ಪ್ರತಿ ಜಿಲ್ಲೆಗೆ ಒಂದು ಠಾಣೆ ಇದೆ. ಠಾಣೆ ಅಧಿಕಾರಿ, ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮೆಸ್ಕಾಂ ಕಾರ್ಯಕಾರಿ ಎಂಜಿನಿಯರ್ ರಾಮ್ರಾಜ್, ದಕ್ಷಿಣ ಕನ್ನಡ ಜಿಲ್ಲೆ ಇನ್ಸ್ಪೆಕ್ಟರ್ ಶಾಂತಾರಾಮ್, ಉಡುಪಿ ಇನ್ಸ್ಪೆಕ್ಟರ್ ಟಿ.ಆರ್.ಜಯಶಂಕರ್, ಶಿವಮೊಗ್ಗ ಇನ್ಸ್ಪೆಕ್ಟರ್ ನಾಗರಾಜ್, ಚಿಕ್ಕಮಗಳೂರು ಇನ್ಸ್ಪೆಕ್ಟರ್ ಎಂ.ವಿ.ಮಲ್ಲಾಪುರ್ ಇದ್ದರು.