ಸುಳ್ಯ ಬಂಟರ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ
ಸುಳ್ಯ: ಮುಂದಿನ ವರ್ಷದಿಂದ ರಾಜ್ಯ ಬಂಟರ ಸಂಘ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಅನುದಾನ ನೀಡುವ ಯೋಜನೆ ರೂಪಿಸಿದ್ದು, ಇದಕ್ಕಾಗಿ ರು. 20 ಕೋಟಿ ತೆಗೆದಿರಿಸಲಾಗಿದೆ ಎಂದು ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಹೇಳಿದರು.
ಅವರು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಬಂಟರ ಸಂಘ ಬೆಂಗಳೂರು ಹಾಗೂ ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಸಹಭಾಗಿತ್ವದಲ್ಲಿ, ತಾಲೂಕಿನ ಸಮಾಜದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು. ಸುಳ್ಯ ಬಂಟರ ಸಂಘದ ಅಧ್ಯಕ್ಷ ಪಿ.ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಬಂಟಸಿರಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಭಾಗವಹಿಸಿದರು. ಸಂಘದ ಕೋಶಾಧಿಕಾರಿ ರಮೇಶ್ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಅಮೃತ ಕುಮಾರ್ ರೈ, ಜಿಲ್ಲಾ ಸಂಘದ ಪದಾಧಿಕಾರಿಗಳಾದ ದಯಾಕರ ಆಳ್ವ ಪೆರುವಾಜೆ, ರಾಜೀವಿ ಆರ್. ರೈ ಹಾಗೂ ಕೇನ್ಯ ರವೀಂದ್ರನಾಥ ಶೆಟ್ಟಿ ಇದ್ದರು.
ಕಾರ್ಯದರ್ಶಿ ಕೆ. ರವೀಂದ್ರನಾಥ್ ರೈ ಹಾಗೂ ವಂದಿಸಿದರು. ಬೂಡು ರಾಧಾಕೃಷ್ಣ ರೈ ನಿರೂಪಿಸಿದರು.