ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹುಲಿಕಲ್ ಘಾಟ್‌ನಲ್ಲಿ ಲಾರಿಗೆ ಬೆಂಕಿ: 290 ಅನಿಲ ಸಿಲಿಂಡರ್‌ಗಳ ಸ್ಫೋಟ

Rashmi Kasaragodu
Updated On : 22 Oct 2013, 11:17 am

ಉಡುಪಿ: ಅನಿಲ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಸುಮಾರು 290 ಸಿಲಿಂಡರ್‌ಗಳು ಸ್ಫೋಟಗೊಂಡು ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಸಂಜೆ ಹೊಸಂಗಡಿ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಹುಲಿಕಲ್ ಘಾಟ್‌ನ ಸಿದ್ದಾಪುರ ಬಳಿ ಹೊಸಂಗಡಿಯಲ್ಲಿ ಸಂಭವಿಸಿದೆ.
 ಘಟನೆ ಕುಂದಾಪುರದಿಂದ ಸುಮಾರು 50 ಕಿ.ಮೀ. ದೂರದ ದಟ್ಟ ಅರಣ್ಯದ ಘಾಟ್ ವಲಯದಲ್ಲಿ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳದವರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬೆಂಕಿ ಹರಡುವುದನ್ನು ತಡೆದಿದ್ದಾರೆ.
ಘಟನೆ ವಿವರ: ಮಂಗಳೂರಿನ ಎಂಆರ್‌ಪಿಎಲ್‌ನಿಂದ ರಾಣಿಬೆನ್ನೂರಿಗೆ ಎಚ್‌ಪಿ ಕಂಪನಿಯ ಸುಮಾರು 300 ಅನಿಲ ಸಿಲಿಂಡರ್‌ನ್ನು ಹೇರಿಕೊಂಡು ಘಾಟ್‌ನಲ್ಲಿ ಸಂಚರಿಸುತ್ತಿದ್ದ ಲಾರಿಯ ಅಡಿ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿತು.
ಲಾರಿಯಿಂದ ಇಳಿದ ಚಾಲಕ ಅಜಯ್ ಲಾರಿಯಲ್ಲಿದ್ದ ಅಗ್ನಿಶಮನ ವ್ಯವಸ್ಥೆ ಬಳಸಿ ಬೆಂಕಿ ನಂದಿಸಲು ಯತ್ನಿಸಿದರೂ ಫಲ ನೀಡಲಿಲ್ಲ.
 ತಕ್ಷಣ ಚಾಲಕ ಅಮಾಸೆಬೈಲು ಪೊಲೀಸ್ ಸ್ಟೇಶನ್‌ಗೆ ಕರೆ ಮಾಡಿದ್ದಾನೆ. ಅಲ್ಲಿಂದ ಪೊಲೀಸರು ಸ್ಥಳಕ್ಕೆ ಬಂದರೂ ಆ ವೇಳೆಗಾಗಲೇ ಲಾರಿಗೆ ಬೆಂಕಿ ಹತ್ತಿಕೊಂಡು ಸಿಲಿಂಡರ್‌ಗಳು ಸ್ಫೋಟಿಸಲು ಆರಂಭವಾಯಿತು.
 ಇದೇ ವೇಳೆ, ಹಿಂದಿನಿಂದ ಅನಿಲ ಜಾಡಿಗಳನ್ನು ಹೇರಿಕೊಂಡು ಬರುತ್ತಿದ್ದ ಇನ್ನೆರಡು ಲಾರಿಗಳ ಸಂಚಾರವನ್ನು ಮೊಟಕುಗೊಳಿಸಲಾಯಿತು. ಹೆದ್ದಾರಿಯ ಎರಡೂ ಪಕ್ಕಗಳಲ್ಲಿ ವಾಹನಗಳನ್ನು ತಡೆಹಿಡಿಯಲಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ಬಳಿಕ ಸಂಜೆ 6 ಗಂಟೆ ವೇಳೆಗೆ ಬೆಂಕಿ ಹತೋಟಿಗೆ ಬಂತು.
 ಲಾರಿಯಲ್ಲಿದ್ದ ಸಿಲಿಂಡರ್‌ಗಳ ಪೈಕಿ 10 ಸಿಲಿಂಡರ್‌ಗಳು ಮಾತ್ರ ಹಾನಿಯಾಗದೆ ಉಳಿದಿದ್ದವು.  ಅಗ್ನಿಶಾಮಕ ದಳದ ಕಾರ್ಯಾಚರಣೆ ನಡು ನಡುವೆಯೂ ಆಗಿಂದಾಗ್ಗೆ ಸಿಲಿಂಡರ್‌ಗಳ ಸ್ಫೋಟಿಸುತ್ತಾ, ಸುಮಾರು 100 ಮೀಟರ್ ಎತ್ತರಕ್ಕೆ ಅವುಗಳ ಭಾಗಗಳು ಚಿಮ್ಮಿ ಈ ಪರಿಸರದಲ್ಲಿ  ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿತ್ತು. ಘಟನೆಯಿಂದ ಹೆದ್ದಾರಿ ಸುತ್ತಲಿನ ಅರಣ್ಯದಲ್ಲಿ ಸುಮಾರು 50 ಮೀಟರ್ ಪರಿಸರದಲ್ಲಿ 100ಕ್ಕೂ ಹೆಚ್ಚು ಮರಗಳು ಕರಟಿ ಹೋಗಿವೆ. ಇನ್ನಷ್ಟು ಬೆಂಕಿ ಹರಡದಂತೆ ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ರಾತ್ರಿ 7 ಗಂಟೆ ಬಳಿಕ ಕಾರ್ಯಾಚರಣೆ ಪೂರ್ಣಗೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮಗೊಂಡಿತು.
ಸ್ಫೋಟಗೊಳ್ಳದೆ ಉಳಿದ ಸಿಲಿಂಡರ್‌ಗಳೂ ತೀವ್ರ ಶಾಖದಿಂದ ಬಿಸಿಯಾಗಿದ್ದು ಸ್ಫೋಟದ ಭೀತಿ ಮೂಡಿಸಿದ್ದವು. ರಾತ್ರಿ ವೇಳೆ ಎಂಆರ್‌ಪಿಎಲ್‌ನ ತಜ್ಞರು ಮಂಗಳೂರಿನಿಂದ ಸ್ಥಳಕ್ಕೆ ಹೊರಟು ಹೆಚ್ಚಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement