ಕರ್ನಾಟಕದಲ್ಲಿ ಕನ್ನಡ ಕಲಿಯಿರಿ
ಮಂಗಳೂರು: ಹೊರರಾಜ್ಯದವರು ಕರ್ನಾಟಕಕ್ಕೆ ಉದ್ಯೋಗಕ್ಕೆ ಬಂದವರು ಕನ್ನಡ ಕಲಿಯಿರಿ, ಇದರಿಂದ ಏಕತೆ ಸಾಧ್ಯ ಎಂದು ಕಾರ್ಪೊರೇಶನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀವಾಸ್ತವ್ ಹೇಳಿದರು.
ಕಾರ್ಪೊರೇಶನ್ ಬ್ಯಾಂಕ್ನ ಸಿರಿಗಂಧ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಬ್ಯಾಂಕ್ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಕನ್ನಡ ಕಲಿಕೆ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.
ಕನ್ನಡದಲ್ಲಿಯೇ ಬರೆದಿರುವ ಸ್ವಾಗತ ಭಾಷಣವನ್ನು ಒಂದೊಂದೇ ಅಕ್ಷರ ಜೋಡಿಸಿ ಹೇಳಿ ಮುಗಿಸಿದರು. ನಾನು ಕನ್ನಡ ತರಗತಿಗೆ ಹೋಗಿ ಕಲಿತ ಬಗ್ಗೆ ಇಂದು ಪರೀಕ್ಷೆ ಎಂದರು. ಎಲ್ಲರಿಗೂ ತಮ್ಮ ಮಾತೃಭಾಷೆಯೇ ಶ್ರೇಷ್ಠ, ಆದರೆ ಆಯಾ ಊರಲ್ಲಿ ಇರುವಾಗ ಆಯಾ ಭಾಷೆಯನ್ನು ಕಲಿಯಲೇ ಬೇಕು. ಉತ್ತರಪ್ರದೇಶದ ವಾರಾಣಸಿಯಲ್ಲಿಯೂ ಕಪ್ಪು ಬಣ್ಣಕ್ಕೆ ಕರಿಯ ಎನ್ನುತ್ತಾರೆ, ಕಾರ್ಕಳಕ್ಕೂ ಕಪ್ಪು ಕಲ್ಲುಗಳಿರುವ ಕರಿಯ ಕಲ್ಲು ಎಂಬ ಹೆಸರಿತ್ತು ಎಂದು ಕೇಳಿದ್ದೇನೆ. ಅಷ್ಟು ದೂರದಲ್ಲಿರು ಊರುಗಳ ಶಬ್ದಗಳ ಅರ್ಥ ಒಂದೇ ರೀತಿಯಾಗಿದೆ ಇದು ವೈಶಿಷ್ಟ್ಯ ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ಕುಮಾರ್ ಕಲ್ಕೂರ ಮಾತನಾಡಿ, ಕನ್ನಡ ಕಾರ್ಯಕ್ರಮ ನಡೆಸುವ ಕಾರ್ಪೊರೇಶನ್ ಬ್ಯಾಂಕ್ನ 'ಸಿರಿಗಂಧ' ಉದ್ಘಾಟನೆ ವೇಳೆ ನಾನು ಬಂದಿದ್ದೆ. ಇದೀಗ ಕನ್ನಡ ತರಗತಿ ನಡೆಸಿ, ಸಿಬ್ಬಂದಿ ಕನ್ನಡ ಕಲಿತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಬಹು ರಾಷ್ಟ್ರೀಯ ಕಂಪೆನಿ ಕೆಲಸ, ಸೂಟು, ಬೂಟು ಹಾಕಿದ ತಕ್ಷಣ ಇಂಗ್ಲಿಷ್ನಲ್ಲಿಯೇ ಮಾತನಾಡಬೇಕು ಎಂಬ ಭ್ರಮೆಗೆ ಒಳಗಾಗುತ್ತೇವೆ. ಈ ಭ್ರಮೆಯನ್ನು ಕಾರ್ಪ್ ಬ್ಯಾಂಕ್ ಝಾಡಿಸಿ ಒದ್ದಿದೆ. ತುಳು ನಾಡಿಗೆ ಬಂದು ತುಳುವನ್ನು ಕಲಿಯುವ ಪ್ರಯತ್ನ ಮಾಡಿ ಎಂದರು.
ಜಿಲೇಬಿ ಚಕ್ಕುಲಿ!: ಕೇರಳದಲ್ಲಿ ಹುಟ್ಟಿ ಬೆಳೆದವ. ಕಾರ್ಪ್ ಬ್ಯಾಂಕ್ಗೆ ಉದ್ಯೋಗಿಯಾಗಿ ಮಂಗಳೂರಿಗೆ ಬಂದಾಗ ಕನ್ನಡ ಲಿಪಿ ನೋಡುವಾಗ ಜಿಲೇಬಿ, ಚಕ್ಕುಲಿ ನೋಡಿದ ಹಾಗೆ ಆಗುತ್ತಿತ್ತು. ಈಗ ತರಗತಿಗೆ ಹೋಗಿ ಅಕ್ಷರಗಳನ್ನು ಜೋಡಿಸಿ ಓದಬಲ್ಲೆ ಎಂದು ರಾಜ್ಮೋಹನ್ ಪೈ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ಕುಮಾರ್ ಕಲ್ಕೂರ, ಕನ್ನಡ ಭಾಷೆ ಜಿಲೇಬಿಯಷ್ಟೆ ಸಿಹಿ, ಚಕ್ಕುಲಿ ಹಾಗೆ ಗಟ್ಟಿ ಮತ್ತು ಗರಿಗರಿಯಾಗಿದೆ ಎಂದು ವಿಶ್ಲೇಷಿಸಿದರು.
ಕನ್ನಡಲ್ಲಿ ನಿರೂಪಣೆ, ಸನ್ಮಾನ: ಕನ್ನಡ ಕಲಿಕಾ ಶಿಬಿರಾರ್ಥಿ ಸರಸ್ವತಿ ಕನ್ನಡದಲ್ಲಿಯೇ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರನಾಥ್ ಹೆಬ್ಬಾರ್ ವಂದಿಸಿದರು. ಶಿಬಿರ ನಡೆಸಿದ ಶೋಭಾ, ಸಿರಿಗಂಧ ಅಧ್ಯಕ್ಷ ರವೀಂದ್ರನಾಥ ಹೆಬ್ಬಾರ್, ಕನ್ನಡ ಕಲಿಕಾ ಶಿಬಿರ ಆಯೋಜಿಸಿದ ಕಾರ್ಪೊರೇಶನ್ ಬ್ಯಾಂಕ್ ಇಡಿ ಶ್ರೀವಾಸ್ತವ ಅವರಿಗೆ ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಜನಾರ್ದನ ಹಂದೆ ಇದ್ದರು.