ನಿಡ್ಡೋಡಿ ಯೋಜನೆ ಸ್ಥಗಿತ ಆಗುವವರೆಗೆ ನಿರಂತರ ಹೋರಾಟ: ಆಸ್ರಣ್ಣ ಎಚ್ಚರಿಕೆ
ಮೂಲ್ಕಿ: ಅಪಾರ ಕೃಷಿ ಭೂಮಿ ಹೊಂದಿರುವ ನಿಡ್ಡೋಡಿಯಲ್ಲಿ ಸರ್ಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಕೃಷಿಕರು ಅತಂತ್ರರಾಗಲಿದ್ದು ಯೋಜನೆ ಸ್ಥಗಿತಗೊಳ್ಳುವವರೆಗೆ ನಿರಂತರ ಹೋರಾಟ ಅಗತ್ಯವಾಗಿದ್ದು, ಜನರು ಸಂಘಟಿತರಾಗಿ ಬೆಂಬಲ ನೀಡಬೇಕೆಂದು ಶ್ರೀ ಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ನಿಡ್ಡೋಡಿಯ ಮಾತೃ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರದ ಬಗ್ಗೆ ಸರ್ಕಾರ ತನ್ನ ನಿಲುವನ್ನು ವ್ಯಕ್ತಪಡಿಸದಿರುವುದರಿಂದ ಕಿನ್ನಿಗೋಳಿಯಿಂದ ಮೂಡುಬಿದಿರೆವರೆಗೆ ಹಮ್ಮಿಕೊಂಡ ಬೃಹತ್ ವಾಹನ ಜಾಥಾವನ್ನು ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವದ ವಸಂತ ಮಂಟಪದ ಬಳಿ ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿ ಸಂಚಾಲಕ ಕಿರಣ್ ಮಂಜನಬೈಲು, ಯೋಜನೆಯನ್ನು ವಿರೋಧಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ಕ್ಷೇತ್ರದ ಶಾಸಕ ಹಾಗೂ ಸಚಿವರಲ್ಲಿ ತಿಳಿಸಿದ್ದು ಈ ಬಗ್ಗೆ ಇವರೆಗೂ ಮುಖ್ಯಮಂತ್ರಿಯವರ ಭೇಟಿ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ನಿಡ್ಡೋಡಿ ಪರಿಸರದ ಜನರಿಗೆ ಹಾನಿಯಾಗುವ ಈ ಯೋಜನೆಯನ್ನು ಸ್ಥಾಪಿಸಲು ಬಿಡುವುದಿಲ್ಲವೆಂದು ತಿಳಿಸಿದರು. ಸಭೆಯನ್ನು ಕಿನ್ನಿಗೋಳಿ ಚರ್ಚಿನ ಧರ್ಮಗುರು ಅಲ್ಫ್ರೇಡ್ ಪಿಂಟೋ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಸಮಿತಿಯ ಅಧ್ಯಕ್ಷ ಅಲ್ಪೋನ್ಸ್ ಡಿಸೋಜ, ಜೊಸ್ಸಿ ಪಿಂಟೋ, ಧರ್ಮಗುರು ವಿಲಿಯಂ ಮಾರ್ಟಿಸ್, ಕಿನ್ನಿಗೋಳಿ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಉಮೇಶ ಬಂಗೇರ, ಕಿನ್ನಿಗೋಳಿ ವಲಯ ಕೆಥೋಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿಸೋಜ ಉಪಸ್ಥಿತರಿದ್ದರು. ವಾಹನ ಜಾಥಾವು ಕಿನ್ನಿಗೋಳಿಯಿಂದ ಮೂಡುಬಿದಿರೆವರೆಗೆ ಸಾಗಿ ಮೂಜುಬಿದಿರೆಯ ಸ್ವರಾಜ್ ಮೈದಾನದಿಂದ ಕಾಲ್ನಡಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.