ನೌಕೆ ಸಮೀಕ್ಷೆಗೆ ಸರ್ವೇಯರ್ ನೇಮಕ ಆಗ್ರಹಿಸಿ ಪ್ರತಿಭಟನೆ
ಮಂಗಳೂರು: ನೌಕೆ ಸಮೀಕ್ಷೆಗೆ ಕಾಯಂ ಸರ್ವೇಯರ್ ನೇಮಕಕ್ಕೆ ಒತ್ತಾಯಿಸಿ ಬಂದರು ಕಾರ್ಮಿಖರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಲಕ್ಷ ದ್ವೀಪಕ್ಕೆ ತೆರಳುತ್ತಿದ್ದ ನೌಕೆಯ ಪ್ರಯಾಣಕ್ಕೆ ತಡೆ ಒಡ್ಡಿದರು. ಈ ಸಂದರ್ಭ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಇತ್ತಂಡಗಳನ್ನು ಸಮಾಧಾನ ಪಡಿಸಿದರು.
ನೌಕೆ ಸಮೀಕ್ಷೆ ಮಾಡುವವರು ಇಲ್ಲದೆ ಬಂದರಲ್ಲಿ ನೌಕೆಗಳ ಮೂಲಕ ನಡೆಯುವ ವಾಣಿಜ್ಯ ವ್ಯವಹಾರಗಳು ಸ್ಥಗಿತವಾಗಿವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಮಂಗಳೂರು ಹಳೆ ಬಂದರು ನೌಕಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆಗೆ ಸಜ್ಜಾಗಿದ್ದರು. ಲಕ್ಷದ್ವೀಪಕ್ಕೆ ಹೋಗುವ ನೌಕೆಗಳ ಕಾರ್ಮಿಕರು ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಇದರಿಂದ ಉಳಿದ ನೌಕಕರು ಲಕ್ಷದ್ವೀಪಕ್ಕೆ ತೆರಳುತ್ತಿದ್ದ ನೌಕೆಯನ್ನು ನಿಲ್ಲಿಸಲು ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿ ಶಾಸಕ ಜೆ.ಆರ್.ಲೋಬೊ ಪ್ರತಿಭಟನೆಕಾರರ ಮನವಿ ಸ್ವೀಕರಿಸಿ, ಶೀಘ್ರದಲ್ಲಿ ಸರ್ವೇಯರ್ ನೇಮಕಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.