ಸಂತ ಭದ್ರಗಿರಿ ಅಚ್ಯುತದಾಸರು ಇನ್ನಿಲ್ಲ
ಉಡುಪಿ: ಹಿರಿಯ ಹರಿಕಥೆ ದಾಸ ಭದ್ರಗಿರಿ ಅಚ್ಯುತದಾಸ (80) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕಲ್ಯಾಣಪುರ ಸಮೀಪದ ಭದ್ರಗಿರಿ ಗ್ರಾಮದ ನಿವಾಸಿಯಾಗಿದ್ದ ಅವರು, ಪ್ರಸಿದ್ಧ ಹರಿಕಥೆ ದಾಸ ದಿ. ಭದ್ರಗಿರಿ ಕೇಶವ ದಾಸ ಅವರ ಸಹೋದರ. ಅವರು ನಾಡೋಜ, ಕನಕ ಪುರಂದರ ಮೊದಲಾದ ಪ್ರಶಸ್ತಿಗೆ ಭಾಜರಾಗಿದ್ದರು. ತನ್ನ ಸುಶ್ರಾವ್ಯ ಕಂಠದ ಭಕ್ತಿ ಪ್ರಧಾನ ಹರಿಕಥೆಗಳಿಂದ ನಾಡಿನಾದ್ಯಂತ ಮನೆಮಾತಾಗಿದ್ದರು. ಅವರ ಹಲವಾರು ಹರಿಕಥೆಗಳು ಧ್ವನಿಸುರುಳಿಯಾಗಿ ಹೊರಬಂದಿದೆ.
1937ರಲ್ಲಿ ವೆಂಕಟರಮಣ ಪೈ, ರುಕ್ಮೀಣಿ ಬಾಯಿ ದಂಪತಿಯ ಮಗನಾಗಿ ಜನಿಸಿದ ಅಚ್ಯುತದಾಸರಿಗೆ ಹರಿಕಥೆಯತ್ತ ಓಲವು ಹುಟ್ಟಲು ಯಕ್ಷಗಾನ ಕಲಾವಿದರಾದ ತಂದೆ ಹಾಗೂ ಭಜನಾ ಕಲಾವಿದೆಯಾದ ತಾಯಿಯೇ ಪ್ರೇರಣೆಯಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪಡೆದಿರುವ ಅಚ್ಯುತದಾಸರು ಕನ್ನಡ, ತುಳು, ಕೊಂಕಣಿ, ಮರಾಠಿ, ಹಿಂದಿ ಭಾಷೆ ಬಲ್ಲವರಾಗಿದ್ದು, ಈ ಎಲ್ಲ ಭಾಷೆಯಲ್ಲೂ ಹರಿಕಥೆ ನಡೆಸುತ್ತಿದ್ದರು. 40 ವರ್ಷದ ಹಿಂದೆಯೇ ಪತ್ನಿ ಶ್ರೀಮತಿಯನ್ನು ಕಳೆದುಕೊಂಡಿದ್ದು, ನಂತರ ಅವರು ಹೆಚ್ಚಾಗಿ ಅಧ್ಯಾತ್ಮದಲ್ಲೇ ತೊಡಗಿಕೊಂಡಿದ್ದರು. 75ಕ್ಕೂ ಹೆಚ್ಚು ಭಕ್ತಿ ಪ್ರಧಾನ ಗ್ರಂಥಗಳನ್ನು ರಚಿಸಿದ್ದು, ಉಡುಪಿಯಲ್ಲಿ ಹರಿಕಥೆ ಕೀರ್ತನಕಾರರ ಸಮ್ಮೇಳನವನ್ನು ಆಯೋಜಿಸಿದ್ದರು. ಶಿಷ್ಯರೊಂದಿಗೆ ಅನೇಕ ಬಾರಿ ಹಿಮಾಲಯ ಯಾತ್ರೆ ನಡೆಸಿದ್ದರು. ಬೆಂಗಳೂರಿನ ನೆಲಮಂಗಲದಲ್ಲಿ ಹರಿಕಥೆ ಅಧ್ಯಯನ ಸಂಶೋಧನಾ ಆಶ್ರಮವನ್ನು ನಿರ್ಮಿಸಿದ್ದು, ಅಲ್ಲೇ ಶಿಷ್ಯರಿಗೆ ಹರಿಕಥೆ ತರಬೇತಿ ನೀಡುತ್ತಿದ್ದರು.