ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಆರ್ಟಿಸಿಯಲ್ಲಿ ಕೈಗಾರಿಕಾಭಿವೃದ್ಧಿ ಪ್ರದೇಶವಾದ ಕೃಷಿ ಭೂಮಿ'

Rashmi Kasaragodu
Updated On : 24 Oct 2013, 11:46 am

ಬೆಳ್ತಂಗಡಿ: ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಯೋಜನೆಯನ್ನು ವಿರೋಧಿಸಿ ಯೋಜನೆಯಿಂದ ಸಂತ್ರಸ್ತರಾಗಲಿರುವ ಜನರು ಬೆಳ್ತಂಗಡಿ ತಾಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ರವಿಕಿರಣ್ ಪುಣಚ, ಸರ್ಕಾರದ ಯೋಜನೆಗಳು ಕೃಷಿ ಭೂಮಿ ಹಾಗೂ ಕೃಷಿಕರ ಬದುಕನ್ನು ಕಸಿದುಕೊಳ್ಳುತ್ತಿವೆ. ಇದರ ವಿರುದ್ಧ ಸಂಘಟಿತ ಹೋರಾಟದ ಹೊರತಾಗಿ ಕೃಷಿಕರು ಅಸ್ತಿತ್ವ ಉಳಿಸಿಕೊಳ್ಳುವುದೇ ಅಸಾಧ್ಯವಾಗಿದೆ. ಯಾವುದೇ ಮಾಹಿತಿ ನೀಡದೆ ಕೃಷಿ ಭೂಮಿಯ ಆರ್ಟಿಸಿಯಲ್ಲಿ ಕೈಗಾರಿಕಾಭಿವೃದ್ಧಿ ಪ್ರದೇಶವೆಂದು ನಮೂದಿಸುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಕೃಷಿಕರು ಆತಂಕಕ್ಕೀಡಾಗುತ್ತಿದ್ದು ಪಹಣಿ ಪತ್ರದಲ್ಲಿ ಕಾನೂನು ಬಾಹಿರವಾಗಿ ಮಾಡಿರುವ ದಾಖಲೆ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಿಪಿಎಂ ಮುಖಂಡ ಬಿ.ಎಂ. ಭಟ್, ಕೃಷಿಕರಿಗೆ ಕನಿಷ್ಠ ನೋಟಿಸ್ ಕೂಡ ನೀಡದೆ ಅವರ ಜಮೀನನ್ನು ಅತಿಕ್ರಮಿಸುವ ಪ್ರಯತ್ನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಂತ್ರಸ್ತರ ಪರವಾಗಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಧರ್ಮಸ್ಥಳ ಗ್ರಾಪಂ ಮಾಜಿ ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್ ಮಾತನಾಡಿ, ಅಧಿಕಾರಿಗಳು ಒಂದೆಡೆಯಿಂದ ಸಂತ್ರಸ್ತರಿಗೆ ಭರವಸೆ ನೀಡುತ್ತಾರೆ. ಮತ್ತೊಂದೆಡೆಯಿಂದ ಅವರನ್ನು ಕತ್ತಲಲ್ಲಿಟ್ಟು ಜಮೀನು ಅಪಹರಿಸುವ ಕಾರ್ಯ ನಡೆಸುತ್ತಿರುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಪುದುವೆಟ್ಟು ಗ್ರಾಪಂ ಅಧ್ಯಕ್ಷ ಗಫೂರ್, ಸದಸ್ಯರಾದ ಆ್ಯಂಟನಿ ಧರ್ಮಸ್ಥಳ, ರವಿ ಪುದುವೆಟ್ಟು, ರೈತ ಸಂಘದ ಮುಖಂಡರಾದ ರೂಪೇಶ್ ರೈ, ಅಶೋಕ್ ಕುಮಾರ್ ರೈ, ಮಂಜುನಾಥ ರೈ, ದಲಿತ ಸಂಘರ್ಷ ಸಮಿತಿ ಮುಖಂಡ ಚಂದು ಎಲ್., ಬಿ.ಕೆ. ವಸಂತ್, ಸಿಪಿಎಂ ಮುಖಂಡ ಶೇಖರ ಎಲ್. ಮತ್ತಿತರರು ಭಾಗವಹಿಸಿದ್ದರು.
ಎಚ್ಪಿಸಿಎಲ್ ಪೈಪ್ಲೈನ್ ಆಕ್ಷೇಪಣಾ ಪರಿಶೀಲನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಇದು ಜನರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.
ಬೆಳ್ತಂಗಡಿ ಎಸ್ಐ  ಪ್ರಕಾಶ್ ದೇವಾಡಿಗ ಮಧ್ಯೆಪ್ರವೇಶಿಸಿ ಎಲ್ಲರನ್ನು ಶಾಂತಗೊಳಿಸಿದರು.
ಯಾವುದೇ ಕಾರಣಕ್ಕೂ ಪೈಪ್ಲೈನ್ ಯೋಜನೆ ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸುವ ಮನವಿಯನ್ನು ಉಪ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.


ಆರ್ಟಿಸಿಯೇ ಕಂಪೆನಿ ಹೆಸರಿಗೆ


ಒಂದೆಡೆ ಗ್ಯಾಸ್ ಪೈಪ್ಲೈನ್ ವಿರೋಧಿಸಿ ಹೋರಾಟಗಳು ನಡೆಯುತ್ತಿದ್ದರೆ ಮತ್ತೊಂದೆಡೆಯಲ್ಲಿ ನೆರಿಯಾದ ಪಂಪ್ಹೌಸ್ಗಾಗಿ ಗುರುತಿಸಲಾಗಿರುವ ಜಾಗಗಳ ಪಹಣಿ ಪತ್ರದಲ್ಲಿ ಈ ಜಾಗಗಳು ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 3 (1ರಂತೆ) ಅಧಿಸೂಚನೆ ಹೊರಡಿಸಲಾಗಿದೆ ಎಂದು ಈಗಾಗಲೇ ದಾಖಲಿಸಲ್ಪಟ್ಟಿದೆ. ಕೃಷಿಕರಿಗೆ ಯಾವುದೇ ಮಾಹಿತಿ ಇಲ್ಲದೆ ಆರ್ಟಿಸಿ ಬದಲಾಗಿರುವುದು ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.


ಆಕ್ಷೇಪಗಳ ಪರಿಶೀಲನೆ ಆರಂಭ


ಗ್ಯಾಸ್ ಪೈಪ್ಲೈನ್ಗಾಗಿ ಜಮೀನು ನೋಟಿಫಿಕೇಶನ್ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ ಆಕ್ಷೇಪಗಳ ಪರಿಶೀಲನಾ ಕಾರ್ಯ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಆರಂಭಗೊಂಡಿದೆ. ಇಂದು ಕುಕ್ಕಳ ಹಾಗೂ ಪಾರೆಂಕಿ ಗ್ರಾಮಗಳ 25 ಆಕ್ಷೇಪಣೆಗಳನ್ನು ಪರಿಶೀಲಿಸಲಾಯಿತು. 25ರಂದು ಕಳಿಯ, ಕೊಯ್ಯೂರು, ಮಚ್ಚಿನ, ಪುದುವೆಟ್ಟು, ಉಜಿರೆ ಗ್ರಾಮಗಳ, 26ರಂದು ಧರ್ಮಸ್ಥಳ, ನೆರಿಯ ಹಾಗೂ ಬೆಳಾಲು ಗ್ರಾಮಗಳ ಸಂತ್ರಸ್ತರ ಆಕ್ಷೇಪಣೆಗಳ ಪರಿಶೀಲನೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement