ನಿರ್ಗತಿಕರ ಬದುಕಿಗೆ ಬ್ಯಾಂಕ್ ಚೈತನ್ಯ: ಡಾ. ವಿನಯ ಹೆಗ್ಡೆ
ಮಂಗಳೂರು: ಭೂ ಸುಧಾರಣೆ ವೇಳೆ ಭೂಮಿ ಕಳಕೊಂಡು ನಿರ್ಗತಿಕರಾಗಿದ್ದ ಸಮುದಾಯದ ಸಾವಿರಾರು ಮಂದಿಗೆ ವಿಜಯಾ ಬ್ಯಾಂಕ್ ಆರ್ಥಿಕ ನೆರವು ನೀಡುವ ಮೂಲಕ ಅವರ ಬದುಕಿಗೆ ಚೈತನ್ಯ ನೀಡಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯ ಉಪಕುಲಪತಿ ಡಾ.ವಿನಯ ಹೆಗ್ಡೆ ಹೇಳಿದರು.
ನಗರದ ಎಸ್ಡಿಎಂ ಕಾಲೇಜು ಸಭಾಂಗಣದಲ್ಲಿ ಬುಧವಾರ ವಿಜಯಾ ಬ್ಯಾಂಕ್ ಸ್ಥಾಪಕರ 83ನೇ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಸಂಕಷ್ಟದಲ್ಲಿರುವ ಅನೇಕ ಕೃಷಿಕರಿಗೂ ಈ ಬ್ಯಾಂಕ್ ಆರಂಭದ ದಿನಗಳಿಂದಲೇ ನೆರವು ನೀಡುತ್ತಾ ಬಂದಿದೆ. ತಾನು ಲೆಮಿನಾ ಸಂಸ್ಥೆ ಹುಟ್ಟುಹಾಕಲು ವಿಜಯಾ ಬ್ಯಾಂಕಿನ ನೆರವನ್ನು ಸ್ಮರಿಸಿದರು. ಶಿಕ್ಷಣ ಹಾಗೂ ಸಾಮಾಜಿಕ ರಂಗದಲ್ಲಿ ವಿಜಯಾ ಬ್ಯಾಂಕ್ನ ಸೇವೆ ಶ್ಲಾಘನೀಯ ಎಂದು ಹೇಳಿದರು.
ಇದಕ್ಕೂ ಮೊದಲು ಬ್ಯಾಂಕಿನ ಸ್ಥಾಪಕ ಮೂಲ್ಕಿ ಸುಂದರರಾಮ್ ಶೆಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಬ್ಯಾಂಕಿನ ಮಂಗಳೂರು ವಲಯ ಸಹಾಯಕ ಮಹಾಪ್ರಬಂಧಕ ರಘುರಾಜ ಶೆಟ್ಟಿ ಮಾತನಾಡಿ, ದೇಶಾದ್ಯಂತ ಬ್ಯಾಂಕ್ 1,460 ಶಾಖೆಗಳನ್ನು ಹೊಂದಿದ್ದು, 1011 ಎಟಿಎಂ ಇದೆ. ಸೆಪ್ಟಂಬರ್ ಅಂತ್ಯಕ್ಕೆ ರು. 1.75 ಕೋಟಿ ವಹಿವಾಟು ನಡೆಸಿದ್ದು, ರು. 1.50 ಕೋಟಿ ಠೇವಣಿ ಹೊಂದಿದೆ ಎಂದರು. ಪ್ರಾಂತೀಯ ಮುಖ್ಯ ಮೆನೇಜರ್ ಕಿಶನ್ಚಂದ್ ಶೆಟ್ಟಿ, ಚೆನ್ನಬಸಪ್ಪ ಇದ್ದರು.