ಬಾಂಬೆ ರಕ್ತ ಗುಂಪಿನ ರೋಗಿಗೆ ತೆರೆದ ಹೃದಯ ಚಿಕಿತ್ಸೆ ಯಶಸ್ವಿ
ಮಂಗಳೂರು: ವಿಶ್ವದಲ್ಲಿಯೇ ಅಪರೂಪದ ಬಾಂಬೆ ರಕ್ತ ಗುಂಪಿಗೆ ಸೇರಿದ ಮಹಿಳೆಗೆ ಹೃದಯ ರಂಧ್ರಕ್ಕೆ ಇಂಡಿಯಾನ ಆಸ್ಪತ್ರೆ ವೈದ್ಯರು ರೋಗಿ ಜತೆ ಮಾತನಾಡುತ್ತಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ!
ಮಂಗಳೂರಿನ ಇಂಡಿಯಾನ ಆಸ್ಪತ್ರೆ ವ್ಯವಸ್ಥಾಪಕ ಡಾ.ಯೂಸುಫ್ ಕುಂಬ್ಳೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ವಿವರ ನೀಡಿದರು.
ಸಕಲೇಶಪುರದ 36 ವರ್ಷದ ರುಕ್ಮಿಣಿ ಎಂಬವರು ಹೃದಯ ಸಂಬಂಧಿ ರೋಗ ಕುರಿತಾಗಿ ತಪಾಸಣೆಗೆ ಇಂಡಿಯಾನ ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆಗೆ ಒಳಪಡಿಸಿದಾಗ ಹೃದಯದ ರಂಧ್ರ ಸಮಸ್ಯೆ ಹುಟ್ಟಿನಿಂದಲೇ ಬಳಲುತ್ತಿರುವುದು ತಿಳಿದುಬಂತು.
ಇದರಿಂದ ರುಕ್ಮಿಣಿ ಹೃದಯದಲ್ಲಿ ಶುದ್ಧ ಮತ್ತು ಅಶುದ್ಧ ರಕ್ತ ಮಿಶ್ರ ಆಗುತ್ತಿತ್ತು. ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ವೈದ್ಯರು ತೆರೆದ ಶಸ್ತ್ರ ಚಿಕಿತ್ಸೆಗೆ ನಿರ್ಧರಿಸಿದರು.
ಜನರಲ್ ಅನಸ್ತೇಶಿಯಾ ಮತ್ತು ವೆಂಟಿಲೇಟರ್ ಬಳಸಿದಲ್ಲಿ ಜೀವಕ್ಕೆ ತೊಂದರೆಯಾಗುವ ಸಂಭವ ಇರುವುದರಿಂದ ಹೃದ್ರೋಗ ತಜ್ಞರಾದ ಡಾ. ನಿಸರ್ಗ, ಹೃದ್ರೋಗ ತಜ್ಞ ಡಾ.ಮಂಜುನಾಥ್ ಮತ್ತು ಡಾ.ಯುಸೂಫ್ ನೇತೃತ್ವದ ವೈದ್ಯರ ತಂಡ ಲ್ಲಿ ರೋಗಿ ಎಚ್ಚರ ಇರುವಂತೆ ಶಸ್ತ್ರ ಚಿಕಿತ್ಸೆ ನಡೆಸಿತು.
ರುಕ್ಮಿಣಿ ಅಪರೂಪದ ಬಾಂಬೆ ರಕ್ತದ ಗುಂಪಿಗೆ ಸೇರಿದ್ದರು. ಇದು ಜಗತ್ತಿನಲ್ಲಿ ಕೇವಲ 179 ಮಂದಿ ಮಾತ್ರ ಇದ್ದಾರೆ. ಆಗ ಡಾ.ನಿಸರ್ಗ ಅವರು ರಕ್ತಕ್ಕೆ ದಾನಿಗಳ ಹುಡುಕಾಟ ಆರಂಭಿಸಿದರು. ಈ ಸಂದರ್ಭ ಮಂಗಳೂರಿನವರೇ ಆದ ನಿಶ್ಚಿತ್ ಯುವಕ ಬಾಂಬೆ ರಕ್ತ ಗುಂಪು ಹೊಂದಿದ್ದರು.
ಶಸ್ತ್ರ ಚಿಕಿತ್ಸೆ ವೇಳೆ ರುಕ್ಮಿಣಿ ಎಚ್ಚರವಾಗಿದ್ದು, ವೈದ್ಯರ ಮಾತುಗಳಿಗೆ ಸ್ಪಂದಿಸುತ್ತಿದ್ದರು. ಕೆಲ ಕ್ಷಣ ಹೃದಯ ಬಡಿತ ನಿಲ್ಲಿಸಿ ರಂಧ್ರ ಮುಚ್ಚಲಾಯಿತು. ಬಾಂಬೆ ರಕ್ತ ಗುಂಪಿನ ರೋಗಿಗೆ ಇಂಡಿಯಾನ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆ ಅಪರೂಪದ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಭಾರತೀಯ ವೈದ್ಯಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದೆ. ತಂಡದಲ್ಲಿ ಅರಿವಳಿಕೆ ತಜ್ಞ ಡಾ.ರೊನಾಲ್ಡ್, ಡಾ.ನಾಗೇಶ್, ಸಹಾಯಕರಾಗಿ ಮಾಜ್, ಇರ್ಷಾದ್ ಇದ್ದರು.