ಬಿ.ಸಿ.ರೋಡ್: ಬಾಂಬೆ ಫ್ಯಾಷನ್ ಬಜಾರ್ ಅಗ್ನಿಗಾಹುತಿ
ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಕೈಕಂಬ ಪೂಂಜಾ ಮೈದಾನದಲ್ಲಿ ಕಳೆದ ಕೆಲ ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದ ಬಾಂಬೆ ಫ್ಯಾಷನ್ ಬಜಾರ್ ಮರಾಟ ಮಳಿಗೆ ಮಂಗಳವಾರ ಮಧ್ಯರಾತ್ರಿ ನಡೆದ ಬೆಂಕಿ ಅನಾಹುತದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಬಟ್ಟೆ ಬರೆ, ಫ್ಯಾನ್ಸಿ ಸಾಮಗ್ರಿಗಳು, ಗೃಹೋಪಯೋಗಿ ಉಪಕರಣಗಳು, ಬ್ಯಾಗ್ ಹಾಗೂ ಇವುಗಳನ್ನು ಜೋಡಿಸಲಾಗಿದ್ದ ಟೇಬಲ್ ಇತ್ಯಾದಿ ಸಾಮಗ್ರಿಗಳು ಭಸ್ಮವಾಗಿದ್ದು, ಸುಮಾರು ರು. 32 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನೆ ವಿವರ: ಉಡುಪಿ ಜಿಲ್ಲೆಯ ಹೂಡೆ ನಿವಾಸಿಗಳಾದ ಮುಹಮ್ಮದ್ ಬಿಲಾಲ್ ಹಾಗೂ ಸಲೀಂ ಹಸನ್ ಮಾಲೀಕತ್ವದಲ್ಲಿ ಎಂಟು ಮಂದಿಯ ಪಾಲುದಾರಿಕೆಯ ಈ ಮಳಿಗೆ ಒಂದು ವರ್ಷದ ಕರಾರಿನಂತೆ ಕಳೆದ ಏಳು ತಿಂಗಳ ಹಿಂದೆ ಆರಂಭಗೊಂಡಿತ್ತು. ಮಂಗಳವಾರ ಮಧ್ಯರಾತ್ರಿ 1.30ರ ಸುಮಾರಿಗೆ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಳಿಗೆಯೊಳಗೆ ಮಲಗಿದ್ದವರು ಎಚ್ಚರಗೊಂಡಾಗ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದ್ದರಿಂದ ಹೊರಗೆ ಓಡಿ ಹೋಗಿದ್ದು ಅಪಾಯದಿಂದ ಪಾರಾಗಿದ್ದಾರೆ. ತಕ್ಷಣ ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಸುದ್ದಿ ರವಾನಿಸಲಾಗಿದೆ.
ಅಗ್ನಿಶಾಮಕದಳ ಸ್ಥಳಕ್ಕೆ ತಲುಪುವಷ್ಟರಲ್ಲಿ ಮಳಿಗೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಈ ಮಳಿಗೆಗೆ ತಾಗಿಕೊಂಡು ವಸ್ತು ಪ್ರದರ್ಶನ ಉತ್ಸವ ಕಾರ್ಯಾಚರಿಸುತ್ತಿದ್ದು ಅದರೊಳಗೆ ಇರಿಸಲಾಗಿದ್ದ ಐಸ್ಕ್ರೀಂ ಮಾರಾಟ ವಾಹನದ ಮುಂಭಾಗಕ್ಕೆ ಬೆಂಕಿಯ ತೀವ್ರತೆಯಿಂದ ಹಾನಿಯಾಗಿದೆ. ಮಳಿಗೆಯಲ್ಲಿ ಬೆಂಕಿ ಉರಿಯುತ್ತಿದ್ದಂತೆ ವಾಹನದ ಗಾಜನ್ನು ಒಡೆದು ಹಿಂದಕ್ಕೆ ತಳ್ಳಿದ್ದರಿಂದ ವಾಹನ ಭಸ್ಮವಾಗುವುದು ತಪ್ಪಿಹೋಗಿದೆ.
ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಂಬೆ ಫ್ಯಾಶನ್ ಬಜಾರ್ ಮಾಲೀಕರಾದ ಮುಹಮ್ಮದ್ ಬಿಲಾಲ್ ಹಾಗೂ ಸಲೀಂ ಹಸನ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ದುಷ್ಕೃತ್ಯ ಶಂಕೆ: ಮಳಿಗೆಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಮಳಿಗೆಯ ಬಳಿ ಯಾವುದೇ ವಿದ್ಯುತ್ ತಂತಿಗಳು ಇಲ್ಲದೆ ಇರುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೋದಿ ಸ್ಟಿಕ್ಕರ್ಗೆ ಹಾನಿ: ದೂರು
ಉಪ್ಪಿನಂಗಡಿ: ಕಡಬ ಬಳಿಯ ಮರ್ಧಾಳದಲ್ಲಿ ನಿಲ್ಲಿಸಿದ್ದ ಬೈಕ್ನಲ್ಲಿ ಅಳವಡಿಸಿದ್ದ ಸ್ಟಿಕ್ಕರನ್ನು ಸುಣ್ಣ ಬಳಿದು ಹಾನಿ ಮಾಡರುವ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ. ನೆಟ್ಟಣದ ಪುರುಷೋತ್ತಮ ಎಂಬವರು ಬುಧವಾರ ತನ್ನ ಬೈಕ್ನಲ್ಲಿ ಬಂದು ಮರ್ಧಾಳದಲ್ಲಿ ನಿಲ್ಲಿಸಿ ಹೊಟೇಲೊಂದಕ್ಕೆ ಹೋದ ಸಂದರ್ಭದಲ್ಲಿ ಬೈಕ್ನಲ್ಲಿ ಅಳವಡಿಸಲಾಗಿದ್ದ ಮೋದಿಯ ಸ್ಟಿಕ್ಕರ್ಗೆ ಸ್ಥಳೀಯ ನಿವಾಸಿ ಸುಲೈಮಾನ್ ಎಂಬವರ ಪುತ್ರ ಅದ್ದು ಯಾನೆ ಅಂದು ಎಂಬಾತ ಬಣ್ಣ ಕಿತ್ತು ಹಾನಿಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯೊಂದಿಗೆ ಅಸಭ್ಯ ವರ್ತನೆ: ರಿಕ್ಷಾ ಚಾಲಕಗೆ ಧರ್ಮದೇಟು
ವಿಟ್ಲ: ವಿಟ್ಲದ ಉದ್ಯಮಿಯೊಬ್ಬರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿದ ರಿಕ್ಷಾ ಚಾಲಕನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿಟ್ಲದ ಕಲಾಶೀಪಾಳ್ಯ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಚಂದಳಿಕೆ ನಿವಾಸಿ, ವಿಟ್ಲದಲ್ಲಿ ಆಟೋ ಚಾಲಕ ಗಣೇಶ (38) ಗೂಸಾ ತಿಂದಾತ. ಈತ ವಿಟ್ಲ ಅಂಗಡಿಯೊಂದರ ಮಾಲೀಕರ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.