ಬಿ.ಸಿ. ರೋಡ್ನಲ್ಲಿ ಟ್ರಾಫಿಕ್ ಜಾಮ್
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್ನಲ್ಲಿ ಮಂಗಳವಾರ ಸುದೀರ್ಘ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಕಿಲೋ ಮೀಟರ್ ದೂರಕ್ಕೆ ವಾಹನಗಳು ಸರತಿ ಸಾಲಿನಲ್ಲಿ ತಾಸು ಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ವಾಹನಗಳ ಅಡ್ಡಾದಿಡ್ಡಿ, ಅವಸರದ ಸಂಚಾರದಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸುತ್ತಲೇ ಇತ್ತು. ಪಾಣೆಮಂಗಳೂರು ನೇತ್ರಾವತಿ ಸೇತುವೆ ಟೋಲ್ಗೇಟ್ ಬಳಿ ಉದ್ಭವಿಸಿದ ವಿವಾದವೊಂದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತು. ಅಪರಾಹ್ನ ಮೂರು ಗಂಟೆ ಸುಮಾರಿಗೆ ಟೋಲ್ ಗೇಟ್ ಬಳಿ ಬರುತ್ತಿದ್ದ ಕಾರೊಂದು ಸುಂಕ ಪಾವತಿಸದೆ ತೆರಳಿದಾಗ, ಟೋಲ್ ಗೇಟ್ ನಿರ್ವಹಣಾ ಸಿಬ್ಬಂದಿ ಆ ಕಾರನ್ನು ತಡೆದು ನಿಲ್ಲಿಸಿ ವಿಚಾರಿಸಿದರು. ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದು, ಸಂಚಾರ ಸ್ಥಗಿತಗೊಂಡು ಬಹಳ ಹೊತ್ತು ವಾಹನಗಳು ಅಲ್ಲೇ ನಿಲ್ಲುವಂತಾಯಿತು. ಇದರಿಂದ ಸಾಲು ಮತ್ತಷ್ಟು ವಿಸ್ತರಿಸಿತು.