ಕಾಲೇಜು ವಿದ್ಯಾರ್ಥಿನಿ ಮಾನಭಂಗ ಯತ್ನ; ಇಬ್ಬರು ಯುವಕರಿಗೆ ಥಳಿತ
ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರು ರಾಜಸ್ಥಾನ ಮೂಲದ ಯುವಕರಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಗರದ ಹೊರ ವಲಯದ ಮಂಜಲ್ಪಡ್ಪು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ರಾಜಸ್ಥಾನದ ಮೂಲದ ಯುವಕರಾದ ಪುತ್ತೂರಿನ ಮಾರ್ಬಲ್ ಅಂಗಡಿಯೊಂದರಲ್ಲಿ ಟೈಲ್ಸ್ ಅಳವಡಿಸುವ ಕೂಲಿ ಕಾರ್ಮಿಕರಾಗಿರುವ ಗಜೇಂದ್ರ ಸಿಂಗ್ ಮತ್ತು ರಾಹುಲ್ ಹಲ್ಲೆಗೊಳಗಾದವರು. ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಸಂಜೆ ತನ್ನ ತರಗತಿ ಮುಗಿಸಿ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಿಕ್ಷಾದಲ್ಲಿ ಬಂದಿಳಿದ ಇಬ್ಬರು ಯುವಕರು ಆಕೆಯ ಚೂಡಿದಾರದ ಶಾಲನ್ನು ಎಳೆದು ಮಾನಭಂಗಕ್ಕೆ ಯತ್ನಿಸಿದರು. ಇದಕ್ಕೆ ಪ್ರತಿರೋಧ ಒಡ್ಡಿದ ಆಕೆಗೆ ಯುವಕನೊಬ್ಬ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಬೆದರಿದ ವಿದ್ಯಾರ್ಥಿನಿ ಬೊಬ್ಬೆ ಹಾಕಿದಾಗ ಸ್ಥಳೀಯರು ಇಬ್ಬರು ಯುವಕರಿಗೆ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.