ಬಾಂಬೆ ರಕ್ತ ಗುಂಪಿನ ರೋಗಿಗೆ ತೆರೆದ ಹೃದಯ ಚಿಕಿತ್ಸೆ ಯಶಸ್ವಿ
ಮಂಗಳೂರು: ವಿಶ್ವದಲ್ಲಿಯೇ ಅಪರೂಪದ 'ಬಾಂಬೆ ರಕ್ತ' ಗುಂಪಿಗೆ ಸೇರಿದ ಮಹಿಳೆಗೆ ಜನರಲ್ ಅನಸ್ತೇಶಿಯಾ ಮತ್ತು ವೆಂಟಿಲೇಟರ್ ಬಳಸದೆ ಇಲ್ಲಿನ ಇಂಡಿಯಾನ ಆಸ್ಪತ್ರೆ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆ ವ್ಯವಸ್ಥಾಪಕ ಡಾ.ಯೂಸುಫ್ ಕುಂಬ್ಳೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ವಿವರ ನೀಡಿದರು. ಸಕಲೇಶಪುರದ 36 ವರ್ಷದ ರುಕ್ಮಿಣಿ ಎಂಬವರು ಹೃದಯ ಸಂಬಂಧಿ ರೋಗ ಕುರಿತಾಗಿ ತಪಾಸಣೆಗೆ ಆಸ್ಪತ್ರೆಗೆ ಆಗಮಿಸಿದ್ದರು. ತಪಾಸಣೆ ವೇಳೆ ಹೃದಯದ ರಂಧ್ರ ಸಮಸ್ಯೆ ಹುಟ್ಟಿನಿಂದಲೇ ಇರುವುದು ತಿಳಿದುಬಂತು. ಇದರಿಂದ ರುಕ್ಮಿಣಿ ಹೃದಯದಲ್ಲಿ ಶುದ್ಧ ಮತ್ತು ಅಶುದ್ಧ ರಕ್ತ ಮಿಶ್ರ ಆಗುತ್ತಿತ್ತು. ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ವೈದ್ಯರು ತೆರೆದ ಶಸ್ತ್ರ ಚಿಕಿತ್ಸೆಗೆ ನಿರ್ಧರಿಸಿದರು. ಜನರಲ್ ಅನಸ್ತೇಶಿಯಾ ಮತ್ತು ವೆಂಟಿಲೇಟರ್ ಬಳಸಿದಲ್ಲಿ ಜೀವಕ್ಕೆ ತೊಂದರೆಯಾಗುವ ಸಂಭವ ಇರುವುದರಿಂದ ಹೃದ್ರೋಗ ತಜ್ಞರಾದ ಡಾ. ನಿಸರ್ಗ, ಡಾ.ಮಂಜುನಾಥ್, ಡಾ. ಯುಸೂಫ್ ನೇತೃತ್ವದ ವೈದ್ಯರ ತಂಡದಲ್ಲಿ ರೋಗಿ ಎಚ್ಚರ ಇರುವಂತೆ ಶಸ್ತ್ರ ಚಿಕಿತ್ಸೆ ನಡೆಸಿತು.