ಬೈಕ್- ಟೆಂಪೊ ಟ್ರಾವೆಲರ್ ಡಿಕ್ಕಿ: ಇಬ್ಬರು ಯುವಕರ ಸಾವು
ಮಂಗಳೂರು: ತೋಕೂರು ಜಂಕ್ಷನ್ನಲ್ಲಿ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಅಪಘಾತ ನಡೆದಿದೆ. ಸುಳ್ಯ ಅನಿಲ್ಕುಮಾರ್ (20) ಮತ್ತು ಉತ್ತರಕನ್ನಡದ ಯೆಲ್ಲಾಪುರ ನಿವಾಸಿ ಆಂಟನಿ ಫರ್ನಾಂಡಿಸ್ (20) ಮೃತಪಟ್ಟವರು. ಅನಿಲ್ ಮತ್ತು ಆಂಟನಿಜೋಕಟ್ಟೆಯತ್ತ ಬೈಕ್ನಲ್ಲಿ ತೆರಳುತ್ತಿದ್ದರು. ಆದರೆ ತೋಕೂರು ಜಂಕ್ಷನ್ ತಲುಪುವ ವೇಳೆ ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿಯಾಯಿತು. ಡಿಕ್ಕಿ ರಭಸಕ್ಕೆ ಇಬ್ಬರು ರಸ್ತೆಗೆ ಬಿದ್ದರು. ಆಂಟನಿ ಸ್ಥಳದಲ್ಲಿಯೇ ಸತ್ತರೆ, ಅನಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟರು. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೋಡಿಂಬಾಡಿ ಬಳಿ ಟೆಂಪೋ- ಬಸ್ ಡಿಕ್ಕಿ; 12 ಮಂದಿ ಗಾಯ
ಪುತ್ತೂರು: ಟೆಂಪೋ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ 12 ಮಂದಿ ಗಾಯಗೊಂಡ ಘಟನೆ ಗುರುವಾರ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯಿಂದ ಸುಳ್ಯ ತಾಲೂಕಿನ ಬೆಳ್ಳಾರೆಗೆ ಮದುವೆ ಔತಣಕ್ಕೆ ತೆರಳುತ್ತಿದ್ದ ಮುರಳೀಧರ್ ಎಂಬವರಿಗೆ ಸೇರಿದ ಟೆಂಪೋ ಮತ್ತು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಕೋಡಿಂಬಾಡಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಟೆಂಪೋ ಚಾಲಕ ರಝಾಕ್ ಹಾಗೂ ಕುಪ್ಪೆಟ್ಟಿಯ ಜಯಲಕ್ಷ್ಮೀ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕುಪ್ಪೆಟ್ಟಿ ನಿವಾಸಿಗಳಾದ ಜಯರಾಮ್, ದಿನೇಶ್ ಶೆಟ್ಟಿ, ಗೋವಿಂದ ಶೆಟ್ಟಿ, ಲಲಿತಾ, ಸುಜಾತಾ ಕಕ್ಯಪದವು, ಲೀಲಾವತಿ ವಿಟ್ಲ, ಪ್ರತಿಮಾ ಕುಪ್ಪೆಟ್ಟಿ, ನಾರಾಯಣ ಕಕ್ಯಪದವು ಹಾಗೂ ಜಯಲತಾ ಸುರತ್ಕಲ್ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇವರೆಲ್ಲರೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯಾಘಾತ: ಕಾರ್ಮಿಕ ಸಾವು
ಮೂಲ್ಕಿ: ಮೂಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಾನಂಪಾಡಿಯ ಸುಧೀರ್ ಕುಮಾರ್ ಎಂಬವರ ಮನೆಯಲ್ಲಿ ಕೆಲ ದಿನಗಳಿಂದ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಶಿವಮೊಗ್ಗದ ಸಾಗರ ತಾಲೂಕಿನ ಎಸ್.ಎನ್. ನಗರದ ನಿವಾಸಿ ಸಂತಾನ್ ಡಿಕೋಸ್ತ(52) ಮೃತಪಟ್ಟಿದ್ದಾರೆ. ಇವರು ಕೆಲಸ ಮುಗಿಸಿ ಬುಧವಾರ ರಾತ್ರಿ ಮಲಗಿದ್ದವರು ಗುರುವಾರ ಬೆಳಗ್ಗೆಯಾದರೂ ಅವರು ಎದ್ದಿರಲಿಲ್ಲ. ಅವರನ್ನು ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವವನ್ನು ಸಂತಾನ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಅನಾಥವಾಗಿದ್ದ ಕಾರು ವಶಕ್ಕೆ
ಮೂಲ್ಕಿ: ಕಿನ್ನಿಗೋಳಿ- ದಾಮಸ್ಕಟ್ಟೆ ರಸ್ತೆಯಲ್ಲಿನ ಮನೆಯೊಂದರ ಕಾಂಪೌಂಡ್ ಮುಂದೆ 15 ದಿನಗಳಿಂದಲೂ ನಿಂತಿದ್ದ ಕೆಂಪು ಬಣ್ಣದ ಮಾರುತಿ 800 ಕಾರನ್ನು ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಮೂಲ್ಕಿ ಪೊಲೀಸರು ಗುರುವಾರ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.