'ಯುಪಿಎ ಸರ್ಕಾರದಿಂದ ಕಾರ್ಮಿಕ ಸೌಲಭ್ಯ ಹೆಚ್ಚಳ'
ಮಂಗಳೂರು: ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ದೇಶದಲ್ಲಿ ಕಾರ್ಮಿಕರ ಸೌಲಭ್ಯ ಹೆಚ್ಚಿಸಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಕೋಡಿಕುನ್ನಿಲ್ ಸುರೇಶ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಮಂಗಳೂರಲ್ಲಿ ಇಎಸ್ಐ ಪ್ರಾದೇಶಿಕ ಕಚೇರಿ ಉದ್ಘಾಟನೆಯಾಗಿರುವುದು ಅತಿ ಸಂತೋಷ ಎಂದರು. ಇಲ್ಲಿನ ಕಾರ್ಮಿಕ ಶಕ್ತಿ ಪ್ರಬಲವಾಗಿದೆ. ಕಾರ್ಮಿಕರಿಗೆ ಗರಿಷ್ಠ ಪ್ರಮಾಣದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ ಎಂದರು. ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗಗಳಲ್ಲಿ ಪ್ರಾದೇಶಿಕ ಕಚೇರಿ ಇದೆ. ರಾಜಾಜಿ ನಗರ ಮತ್ತು ಗುಲ್ಬರ್ಗದಲ್ಲಿ ಇಎಸ್ಐ ಮೆಡಿಕಲ್ ಕಾಲೇಜ್ಗಳು ಕಾರ್ಯಾಚರಿಸುತ್ತಿದೆ. ರಾಜ್ಯ ಸರ್ಕಾರ ಕಾರ್ಮಿಕರಿಗೆ ಶ್ರೇಯೋಭಿವೃದ್ಧಿಗೆ ಯಾವುದೇ ಕಾರ್ಯ ಕೈಗೊಳ್ಳಲು ತೀರ್ಮಾನಿಸಿದರೂ ಕೇಂದ್ರ ಅದಕ್ಕೆ ಸಹಾಯ ಮಾಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕ ಜೆ.ಆರ್.ಲೋಬೋ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ ಇದ್ದರು.