ಸೌಜನ್ಯ ಪ್ರಕರಣ ಸಿಬಿಐಗೆ ಅಗ್ರಹಿಸಿ ಪ್ರತಿಭಟನೆ
ಉಪ್ಪಿನಂಗಡಿ: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಅಗ್ರಹಿಸಿ ವಿವಿಧ ಸಂಘಟನೆ ಆಶ್ರಯದಲ್ಲಿ ಆಲಂಕಾರಿನಲ್ಲಿ ರಸ್ತೆ ತಡೆ ಪ್ರತಿಭಟನೆ ಗುರುವಾರ ನಡೆಯಿತು.
ಆಲಂಕಾರು ಶ್ರೀದುರ್ಗಾಂಬಾ ಪದವಿಪೂರ್ವ ಕಾಲೇಜಿನ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಪೇಟೆಯಾದ್ಯಂತ ಮೆರವಣಿಗೆ ನಡೆಸಿ ಉಪ್ಪಿನಂಗಡಿ- ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದರು. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ನೀಡಿದರು.
ಸೌಜನ್ಯ ಕೊಲೆ ಸಂಭವಿಸಿ ಒಂದು ವರ್ಷ ಕಳೆದರೂ ಸಮರ್ಪಕ ತನಿಖೆ ನಡೆದಿಲ್ಲ. ಅಪರಾಧಿಗಳು ಯಾರೆಂದು ತಿಳಿಯಲಾಗಿಲ್ಲ. ತನಿಖೆಯ ನಿರ್ಲಕ್ಷತೆಯ ನಿಗೂಢತೆಯಿಂದಾಗಿ ಎಲ್ಲರನ್ನೂ ಅಪನಂಬಿಕೆಯಿಂದ ನೋಡುವ ದುಸ್ಥಿತಿ ನಿರ್ಮಾಣವಾಗಿದೆ. ಇದು ಇಡೀ ಸಮಾಜಕ್ಕೆ ಅನಪೇಕ್ಷಿತ ಪರಿಣಾಮವನ್ನು ಬೀರುತ್ತಿದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ಸತ್ಯ ನಿಖರವಾಗಿ ತಿಳಿಸಬೇಕು. ಕ್ರೌರ್ಯ ಮೆರೆದ ಪಾಪಿಗಳು ಯಾರೇ ಆದರೂ ಅವರನ್ನು ದಂಡಿಸಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಮಲಾಕ್ಷ ರೈ ಮನವಳಿಕೆ, ಪೂವಪ್ಪ ನಾಯ್ಕ, ಗುರುಪ್ರಸಾದ್ ಜನಾರ್ದನ ಗೌಡ ಕಯ್ಯಪೆ, ದಯಾನಂದ ಗೌಡ ಆಲಡ್ಕ, ದಯಾನಂದ ಗೌಡ ಬಡ್ಡಮೆ, ತಾರಾ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಆಶಾ ಲತಾ, ರಾಧಾಕೃಷ್ಣ ರೈ, ಅಬ್ದುಲ್ ಕುಂಞ, ಅಬೂಬಕ್ಕರ್ ನೆಕ್ಕರೆ, ಪದ್ಮನಾಭ ಗೌಡ, ಸುಧಾಕರ ಪೂಜಾರಿ ಕಲ್ಲೇರಿ, ಗಣರಾಜ್, ಅಶೋಕ್ ಗೌಡ ಪಜ್ಜಡ್ಕ, ಶ್ರೀಧರ ಪೂಜಾರಿ ನೆಕ್ಕಿಲಾಡಿ, ದಿವಾಕರ ಕುಂಬಾರ, ಅಶೋಕ್ ನಗ್ರಿ ಭಾಗವಹಿಸಿದ್ದರು.
ಪ್ರತಿಭಟನೆ ಬಳಿಕ ಆಲಂಕಾರು ಕಂದಾಯ ಇಲಾಖೆ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.