ಈಜುಕೊಳದಲ್ಲಿ ಮುಳುಗಿ ಸಾವು
ಮಂಗಳೂರು: ಲೇಡಿಹಿಲ್ ಮಹಾನಗರಪಾಲಿಕೆ ಸೇರಿದ ಈಜುಕೊಳದಲ್ಲಿ ತರಬೇತಿಗೆ ಬಂದಿದ್ದ ಸುಹಾನ್ (13) ಮುಳುಗಿ ಮೃತಪಟ್ಟಿದ್ದಾನೆ. ಬೋಳೂರು ಸೋಮಶೇಖರ ಎಂಬರ ಮಗ ಸುಹಾನ್ ಈಜುಕೊಳದಲ್ಲಿ ನಾಲ್ಕು ಮಂದಿ ಗೆಳೆಯರ ಜತೆ ಈಜು ಕಲಿಯುತ್ತಿದ್ದ. ತರಬೇತಿ ಮುಗಿದ ಹಿನ್ನೆಲೆಯಲ್ಲಿ ತರಬೇತುದಾರರು ತೆರಳಿದ್ದರು. ಗೆಳೆಯರೆಲ್ಲ 15 ಅಡಿ ಎತ್ತರಿಂದ ಕೊಳಕ್ಕೆ ಧುಮುಕುಮುದನ್ನು ನೋಡಿ ಈತನೂ ಹಾರಿದ್ದಾನೆ. ಆದರೆ ನೀರಲ್ಲಿ ಮುಳುಗಿದ್ದಾನೆ. ಅಕ್ಕಪಕ್ಕದವರು ಆತನನ್ನು ನೀರಿಂದ ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಮಧ್ಯಾಹ್ನ ಊಟ ಮುಗಿದ ತಕ್ಷಣ ಈಜಲು ಬಂದಿದ್ದ. ಅಕ್ಕ ಪಕ್ಕ ಈಜುವವರು ಇದ್ದರೂ ಮುಳುಗಿ ಮೃತಪಟ್ಟಿದ್ದಾನೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶೂ ಮಳಿಗೆಗೆ ನುಗ್ಗಿ ದಾಂದಲೆ
ಮಂಗಳೂರು: ಮಾರಿಪಳ್ಳದ ರೌಡಿ ನೌಶೀರ್ ಮತ್ತು ತಂಡ ಶುಕ್ರವಾರ ರಾತ್ರಿ ಲಿಂಕಿಂಗ್‌ಟವರ್ಸ್‌ನಲ್ಲಿರುವ ಶೂ ಇಂಡಿಯಾ ಅಂಗಡಿಗೆ ದಾಳಿ ನಡೆಸಿ ಪಾದರಕ್ಷೆಗಳನ್ನು ಚೆಲ್ಲಾಡಿದೆ. ಅಂಗಡಿಯ ಕೆಲಸಗಾರರು ನೌಶೀರ್‌ನ ತಂಡದವರಿಗೆ ಹಲ್ಲೆ ನಡೆಸಿದ್ದರು. ಇದೇ ಸಿಟ್ಟಿನಲ್ಲಿ ನಗರದ ಶೂ ಮಳಿಗೆ ಮೇಲೆ ತಂಡದೊಂದಿಗೆ ಬಂದು ದಾಳಿ ನಡೆಸಿದ್ದಾರೆ. ಈತ ನೂರುದ್ದೀನ್ ಕೊಲೆ ಪ್ರಕರಣ ಆರೋಪದಡಿ ಜೈಲ್‌ನಲ್ಲಿದ್ದ.