ಉಳ್ಳಾಲ ಜುಮಾ ನಮಾಜಿಗೆ ಮರಳಿ ಯತ್ನ: 10 ಸೆರೆ
ಮಂಗಳೂರು: ಉಳ್ಳಾಲ ದರ್ಗಾ ಮುಂಭಾಗದ ಮೊಹಿಯುದ್ದೀನ್ ಮಸೀದಿಗೆ ಶುಕ್ರವಾರ ಬೆಳಗ್ಗೆ ಜುಮ್ಮಾ ಪ್ರಾರ್ಥನೆಗೆ ಆಗಮಿಸಿದ ಹತ್ತು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮಸೀದಿ ಅಧ್ಯಕ್ಷ ಸಹಿತ ಹತ್ತು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇತ್ತಂಡಗಳ ನಡುವೆ ರಾಜಿ ಪಂಚಾಯತಿಕೆ ಹಿನ್ನೆಲೆಯಲ್ಲಿ ಬಳಿಕ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಬಿಗುಬಂದೋಬಸ್ತ್ ನಡುವೆಯೆ ಧರ್ಮಗುರುಗಳು ಮಾರುವೇಷದಲ್ಲಿ ತೆರಳಿ ಜುಮಾ ನಮಾಜ್ ನೆರವೇರಿಸಿದ್ದಾರೆ !
ಉಳ್ಳಾಲ ಮೇಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಯಲ್ಲಿ ಜುಮಾ ನಮಾಜ್ ಸ್ಥಾನಮಾನ ನೀಡುವ ವಿವಾದದಿಂದ ಉಂಟಾದ ಗಲಭೆಗೆ ಸಂಬಂಧಿಸಿದಂತೆ ಅ.14ರಂದು ಹೊಡೆದಾಟ ನಡೆದಿದ್ದು, ಇಬ್ಬರು ಪೊಲೀಸರು ಸಹಿತ 8 ಮಂದಿ ಗಾಯಗೊಂಡಿದ್ದರು. ಇಬ್ಬರಿಗೆ ಚೂರಿಯಿಂದ ಇರಿಯಲಾಗಿತ್ತು. ಲಾಠಿಚಾರ್ಜ್ ನಡೆದಿತ್ತು. ಈ ಪ್ರಕರಣದಲ್ಲಿ ಎರಡು ತಂಡಗಳ ಪರಸ್ಪರ ದೂರು ನೀಡಿದ್ದವು.
ಬಿಗು ಭದ್ರತೆ: ಹೊಸಪಳ್ಳಿ ಜುಮಾ ನಮಾಜ್ ಮಾಡದಂತೆ ಶುಕ್ರವಾರ ಬೆಳಗ್ಗಿನಿಂದ ಮೂರು ಕೆಎಸ್ಆರ್ಪಿ ಪಡೆ ಕಾಯುತ್ತಿತ್ತು. ಎಸಿಪಿ, ನಾಲ್ವರು ಇನ್ಸ್ಪೆಕ್ಟರ್ಗಳ ನೇತೃತ್ವದ ಪೊಲೀಸ್ ಪಡೆ ಬೆಳಗ್ಗಿನಿಂದಲೇ ಜುಮಾ ಮಸೀದಿ ನಮಾಜ್ಗೆ ಪ್ರವೇಶಿಸದಂತೆ ತಡೆಹಿಡಿದರು.
ಆದರೂ ನಮಾಜು ನಡೆಯುವ ಸಂದರ್ಭ ಮಸೀದಿ ಪ್ರವೇಶಿಸಲು ಯತ್ನಿಸಿದ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ, ಪುರಸಭೆ ಸದಸ್ಯ ಮುಸ್ತಫಾ ಹಾಗೂ ಅವರ ಜತೆ ಇದ್ದ ನೌಷಾದ್, ಅಬೂಬಕ್ಕರ್, ಸಲೀಂ ಇಲ್ಯಾಸ್, ಹಸೈನಾರ್, ಅಬ್ಬಾಸ್, ರೆಹಮಾನ್, ಫೈರೋಝ್ ಸಹಿತ ಹತ್ತು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದರು.
ಜುಮಾ ನಮಾಜು ನಡೆಯದಂತೆ ಪೊಲೀಸರು ಮೊಯ್ದಿನ್ ಮಸೀದಿ ಇಮಾನ್ ಯೂಸುಫ್ ಮಿಸ್ಬಾಹ್ ಹಾಗೂ ಉಸ್ತಾದರನ್ನು ಗೃಹಬಂಧನದಲ್ಲಿರಿಸಿದ್ದರು. ಮಸೀದಿ ಹೊರಗಿಂದ ಬೆಳಗ್ಗೆ 5.30ರ ವರೆಗೆ ಬಿಗು ಬಂದೋಬಸ್ತ್ ಮಾಡಿದ್ದರು. ಆದರೆ ಇದಕ್ಕಿಂತ ಮೊದಲೇ ಸುಮಾರು 75 ಮಂದಿ ಮಸೀದಿ ಒಳಗೆ ಉಳಿದಿದ್ದರು. ಒಳಗೆ ಉಳಿದವರು ಮಧ್ಯಾಹ್ನದ ಜುಮಾ ನಮಾಜು ಸಾಂಗವಾಗಿ ನಡೆಸಿದರು!
ಮಾರುವೇಷ: ಹೊಸಪಳ್ಳಿಯ ಖತೀಬರು ಮಸೀದಿ ಒಳಗೆ ಆಗಮಿಸುವುದನ್ನು ಪೊಲೀಸರು ತಡೆಯುವ ಸಾಧ್ಯತೆ ಬಗ್ಗೆ ಮೊದಲೇ ಅರಿತಿದ್ದ ಮಸೀದಿ ಆಡಳಿತ ಮಂಡಳಿ, ಬೇರೆ, ಬೇರೆ ಮಸೀದಿಗಳಿಂದ 5 ಮಂದಿ ಗುರುಗಳನ್ನು ಕರೆತಂದಿದ್ದು, ಗುರುಗಳು ಜನಸಾಮಾನ್ಯರ ಉಡುಗೆಯಲ್ಲಿ ಆಗಮಸಿದ್ದರು. ಈ ತಂತ್ರ ಪೊಲೀಸರ ಅರಿವಿಗೆ ಬರಲೇ ಇಲ್ಲ. ಸಾಮಾನ್ಯ ಉಡುಗೆಯಲ್ಲಿದ್ದ ಗುರುಗಳು ಜುಮಾ ನಮಾಜು ನೆರವೇರಿಸಿದರು ಎಂದು ಉಳ್ಳಾಲ ಪುರಸಭೆ ಸದಸ್ಯ ಫಾರೂಕ್ ಉಳ್ಳಾಲ್ ತಿಳಿಸಿದರು.
ಬೆಂಗಳೂರಲ್ಲಿ ಸಭೆ: ಕಳೆದ ಶುಕ್ರವಾರ ನಡೆದಿದ್ದ ಅಹಿತಕರ ಘಟನೆ ಹಿನ್ನಲೆಯಲ್ಲಿ ಅ.21ಕ್ಕೆ ಬೆಂಗಳೂರಿನ ವಕ್ಫ್ ಮಂಡಳಿ ಕಚೇರಿಯಲ್ಲಿ ಸಭೆ ನಡೆದಿತ್ತು. ವಕ್ಫ್ ಅಧ್ಯಕ್ಷ ರಿಯಾಝ್ ಖಾನ್ ನೇತೃತ್ವದಲ್ಲಿ ಮೊಹಿಯುದ್ದೀನ್ ಮಸೀದಿ ಮತ್ತು ದರ್ಗಾ ಸಮಿತಿ ಸೇರಿದಂತೆ ಗಣ್ಯರು ಸೇರಿದ್ದರು. ಆದರೆ ಒಮ್ಮತ ಅಭಿಪ್ರಾಯ ವ್ಕಕ್ತವಾಗಿಲ್ಲ.
'ಎಲ್ಲ ಖಾಜಿಗಳ ಒಮ್ಮತವಿದ್ದರೆ ಮಾತ್ರ ಜುಮಾ ನಮಾಝ್ ಸಲ್ಲಿಸುವುದಾಗಿ ಬೆಂಗಳೂರಲ್ಲಿ ನಡೆದ ವಕ್ಫ್ ಸಭೆಯಲ್ಲಿ ತಿಳಿಸಿದ್ದೆವು. ನಮಾಜ್ ನಿಲ್ಲಿಸಲು ವಕ್ಫ್ ಮಂಡಳಿಗೆ ಅಧಿಕಾರ ಇಲ್ಲ. ಇಸ್ಲಾಂ ಶರೀಯತ್ ಪ್ರಕಾರ ಖಾಝಿಯರೇ ತೀರ್ಮಾನ ಮಾಡಬೇಕು. ಆದರೆ ನಮ್ಮ ಮಾತಿಗೆ ಬೆಲೆ ನೀಡದೆ ಬೇರೆ ಮೀಟಿಂಗ್ ನಡೆಸಿ ನೋಟಿಸ್ ಜಾರಿ ಮಾಡಿದ್ದರಿಂದ ನೋಟಿಸ್ಗೆ ಬೆಲೆ ನೀಡದೆ ಜುಮಾ ನಮಾಜ್ ಮಾಡಿದ್ದೇವೆ' ಎಂದು ಹೊಸಪಳ್ಳಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ತಿಳಿಸಿದ್ದಾರೆ.
ರಾಜಿನಾಮೆ: ಉಳ್ಳಾಲ ದರ್ಗಾ ಸಮಿತಿ ಜತೆ ಕಾರ್ಯದರ್ಶಿ ಬಳ್ಳಾರಿ ಅಶ್ರಫ್, ದರ್ಗಾ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ನಜೀಂ ಸಹಿತ ಹಲವು ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಗಲಭೆ ಮಾಡದಂತೆ ನಿಯಂತ್ರಿಸುತ್ತಿದ್ದ ಅಝೀಝ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ದರ್ಗಾ ಸಮಿತಿ ಅಧ್ಯಕ್ಷ ಯು.ಕೆ.ಹಂಝ ಈ ಸಂದರ್ಭ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಪ್ರಭಾರ ಅಧ್ಯಕ್ಷ ಅಶ್ರಫ್ ವಿರುದ್ಧ ಹಲವು ಮಂದಿಗೆ ಅಸಮಾಧಾನವಿತ್ತು.
ಪವಿತ್ರ ಉಳ್ಳಾಲ ದರ್ಗಾ ವ್ಯಾಪ್ತಿಯಲ್ಲಿ ಇರಿತ, ಪ್ರಾರ್ಥನೆಗೆ ಬಂದವರ ರಕ್ತ ಹರಿಸಿರುವುದು ಮತ್ತು ದರ್ಗಾ ಸಮಿತಿ ಪದಾಧಿಕಾರಿಗಳ ವಿರುದ್ಧ ಕೊಲೆಯತ್ನ ಆರೋಪ ಇರುವ ಹಿನ್ನೆಲೆಯಲ್ಲಿ 12 ಮಂದಿ ಸದಸ್ಯರು ಈಗಾಗಲೇ ರಾಜಿನಾಮೆ ಸಲ್ಲಿಸಿದ್ದಾರೆ.
ಇನ್ನು 15 ಮಂದಿ ರಾಜಿನಾಮೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ದರ್ಗಾ ಸಮಿತಿಯಲ್ಲಿ 55 ಮಂದಿ ಸದಸ್ಯರಿದ್ದಾರೆ.