ಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ಆಗಲಿ: ಹಿಂಜಾವೇ
ಮಂಗಳೂರು: ಹಿಂದೂ ವಿರೋಧಿ ಸಂಘಟನೆಗಳು ಸೌಜನ್ಯ ಪ್ರಕರಣವನ್ನು ನೆಪ ಮಾಡಿಕೊಂಡು ಧಾರ್ಮಿಕ ಕ್ಷೇತ್ರದ ತೇಜೋವಧೆಯಲ್ಲಿ ತೊಡಗಿದೆ ಎಂದು ಹಿಂದೂ ಜಾಗರಣ ವೇದಿಕೆ ಆಪಾದಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಹೋರಾಟ ನಡೆಸಿದರೆ ವೇದಿಕೆ ರಾಜ್ಯಾದ್ಯಂತ ಪ್ರತಿ ಚಳವಳಿ ನಡೆಸಲಿದೆ ಎಂದು ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಪ್ರಕರಣ ತನಿಖೆ ಮುಗಿಯುವವರೆಗೆ ವಿನಾಕಾರಣ ಆರೋಪ ಮಾಡುವುದು ಸರಿ ಅಲ್ಲ. ಸಿಐಡಿ ತನಿಖೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿರುವುದರಿಂದ ಸಿಬಿಐ ತನಿಖೆ ನಡೆಸಬೇಕು. ಸಿಬಿಐ ಮೇಲೂ ನಮಗೆ ಪೂರಾ ವಿಶ್ವಾಸ ಇಲ್ಲ. ಕೇಂದ್ರದ ಕಲ್ಲಿದ್ದಲು ಹಗರಣ ತನಿಖೆ ಮಾಡುತ್ತಿರುವ ರೀತಿಯಲ್ಲಿ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಪ್ರಕರಣ ಸಿಬಿಐ ತನಿಖೆ ಆಗಬೇಕು ಎಂದರು. ಗೋಷ್ಠಿಯಲ್ಲಿ ವಾಸುದೇವ ಗೌಡ, ರವಿರಾಜ್, ಕಿಶೋರ್ ಇದ್ದರು.