ಕೋಳಿ ಸಾಗಾಟದ ವಾಹನ ಅಪಘಾತ: ಕರುವೇಲು ಪರಿಸರದಲ್ಲಿ ಭರ್ಜರಿ ಊಟ
ಉಪ್ಪಿನಂಗಡಿ: ಕೋಳಿ ಸಾಗಾಟದ ಟೆಂಪೊವೊಂದು ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಅಪಘಾತಕ್ಕೀಡಾಗಿ ಕೋಳಿಗಳು ಎಲ್ಲೆಂದರಲ್ಲಿ ಚದುರಿ ಬಿದ್ದ ಘಟನೆಯ ಬೆನ್ನಲೇ ಪರಿಸರದ ಹಲವಾರು ಮನೆಗಳಿಗೆ ಕೋಳಿ ಸರಬರಾಜಾಗಿ ಭರ್ಜರಿ ಊಟ ತಯಾರಿಸಿದ ಘಟನೆ ನಡೆದಿದೆ. ಶನಿವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 75ರ ಪುತ್ತೂರು ತಾಲೂಕು ಕರುವೇಲು ಬಳಿ ಈ ಅವಘಡ ಸಂಭವಿಸಿದ್ದು, ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕೋಳಿ ಒಯ್ಯುತ್ತಿದ್ದ ಟೆಂಪೊಮೊಂದು ಚಾಲಕನ ಹತೋಟಿ ತಪ್ಪಿ ರಸ್ತೆಯ ಬದಿಗೆ ಮಗುಚಿ ಬಿತ್ತು. ಘಟನೆಯಿಂದ ಟೆಂಪೋದಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲ್ಪಟ್ಟರೆ, ಇತ್ತ ಅಪಘಾತದಿಂದ ರಸೆಯಲ್ಲೆಲ್ಲಾ ಚದುರಲ್ಪಟ್ಟ ಕೋಳಿಗಳು ನಿಧಾನಗತಿಯಲ್ಲಿ ಕಂಡ ಕಂಡವರ ಪಾಲಾಗತೊಡಗಿತು. ಈ ದೃಶ್ಯವನ್ನ ಕಂಡ ಮಂದಿ ಸುದ್ದಿ ಬಿತ್ತರಿಸಿ, ಹೊರಗಿನಿಂದಲೂ ಜನ ಬಂದು ಕೋಳಿ ಕೊಂಡೊಯ್ಯಲು ಮುಗಿ ಬಿದ್ದರು. ಇತ್ತ ಸುಲಭವಾಗಿ ದೊರೆತ ಕೋಳಿ ಮನೆಯಲ್ಲಿ ಖಾದ್ಯಕ್ಕೆ ಒಳಗಾಗಿ ಭರ್ಜರಿ ಭೋಜನವನ್ನು ಉಣ್ಣುವಂತೆ ಮಾಡಿತು. ಟೆಂಪೋ ಚಾಲಕ, ನಿರ್ವಾಹಕ ಚಿಕಿತ್ಸೆ ಪಡೆದು ಹಿಂತಿರುಗುವಷ್ಟರಲ್ಲಿ ಕೋಳಿ ಹಲವರು ಹೊಟ್ಟೆ ಸೇರಿಯಾಗಿತ್ತು.
ಕಮರಿಗೆ ಬಿದ್ದ ಬಸ್
ಉಪ್ಪಿನಂಗಡಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಕಮರಿಗೆ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಶನಿವಾರ ಸಂಭವಿಸಿದೆ. ಶನಿವಾರ ಮಧ್ಯಾಹ್ನ ಬೆಳ್ತಂಗಡಿಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬಸ್ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಬೈಕೊಂದಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆಯನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಕಮರಿಗೆ ಬಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರು ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರೂ ಅವರನ್ನು ಬಸ್‌ನಿಂದ ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಸ್ಥಳೀಯರ ಸಹಕಾರದಿಂದ ಪ್ರಾಯಾಣಿಕರನ್ನು ಹೊರಗೆಳೆದು ರಕ್ಷಿಸಲಾಯಿತು.