ಸೌಜನ್ಯಾ ಪ್ರಕರಣ, ಸಿಬಿಐ ತನಿಖೆ ಅಗತ್ಯ: ಶಾಸಕ ಬಂಗೇರ ಆಗ್ರಹ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್.ಪಿ.ಯಾಗಿದ್ದ ಅಭಿಷೇಕ್ ಗೋಯಲ್ ಹಾಗೂ ಬೆಳ್ತಂಗಡಿಯಲ್ಲಿ ಎಸ್.ಐ.ಯಾಗಿದ್ದ ಯೋಗೀಶ್ ಕುಮಾರ್ ಅವರು ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣವನ್ನು ದಿಕ್ಕುತಪ್ಪಿಸಿ ಗೊಂದಲ ಉಂಟು ಮಾಡಿದ್ದಾರೆ. ಆದ್ದರಿಂದ ತಕ್ಷಣ ಇವರಿಬ್ಬರ ತನಿಖೆ ನಡೆಸಿ ಅಮಾನತು ಮಾಡಬೇಕು ಹಾಗೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ತನಿಖೆ ಆರಂಭದಿಂದಲೇ ದಿಕ್ಕು ತಪ್ಪಿದೆ. ಬಂದ ನಾಲ್ಕು ಮಂದಿ ತನಿಖಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸದೆ ಸ್ಥಳೀಯ ಪೊಲೀಸರು ಬರೆದಿಟ್ಟ ದಾಖಲೆಗಳನ್ನು ಇಟ್ಟುಕೊಂಡೇ ವರದಿ ಸಿದ್ಧಪಡಿಸಿದ್ದಾರೆ. ಇದರಿಂದ ತಾಲೂಕಿನ ಜನರಲ್ಲಿ ಗೊಂದಲ, ಅನುಮಾನಗಳು ಸೃಷ್ಟಿಯಾಗಿವೆ. ಇದು ಜಿಲ್ಲೆಯಾದ್ಯಂತ ವ್ಯಾಪಿಸಿದ್ದು ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದ್ದು ಜನರಲ್ಲಿ ಮೂಡಿರುವ ಅನುಮಾನಗಳನ್ನು ಹೋಗಲಾಡಿಸಲು ಸಿಬಿಐ ತನಿಖೆಯಿಂದಲೇ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತಾನು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಈ ವಿಚಾರದ ಗಂಭೀರತೆ ಮನದಟ್ಟು ಮಾಡಿದ್ದೇನೆ. ಗೃಹ ಸಚಿವರಿಗೂ ಪತ್ರ ಬರೆದು ವಿಚಾರ ತಿಳಿಸಿದ್ದೇನೆ. ಮುಖ್ಯಮಂತ್ರಿ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಸರ್ಕಾರದ ನಿಲುವಲ್ಲ: ರಾಜ್ಯ ಸರ್ಕಾರದ ಸಚಿವರು ಕೆಲವು ಸಭೆಗಳಲ್ಲಿ ಭಾಗವಹಿಸಿ ಹೇಳಿಕೆಗಳನ್ನು ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಅದು ಅವರ ವೈಯಕ್ತಿಕ ವಿಚಾರವಾಗಿದೆ. ಸರ್ಕಾರದ ನಿಲುವಲ್ಲ. ಈ ಬಗ್ಗೆ ತಾನೇನು ಮಾತನಾಡಲಾರೆ ಎಂದರು. ಗೋಷ್ಠಿಯಲ್ಲಿ ಚಂದು ಎಲ್., ಬೇಬಿ ಸುವರ್ಣ, ವಸಂತ ಬಿ.ಕೆ. ಇದ್ದರು.