ಹೆಜ್ಜೇನು ಕಡಿತದಿಂದಗಾಯಗೊಂಡಿದ್ದ ವ್ಯಕ್ತಿ ಸಾವು
ಶಂಕರನಾರಾಯಣ: ಇಲ್ಲಿನ ಸಿದ್ದಾಪುರ ಗ್ರಾಮದ ಮತ್ತಿಬೇಕು ಎಂಬಲ್ಲಿ ವ್ಯಕ್ತಿಯೊಬ್ಬರು ಹೆಜ್ಜೇನು ಕಡಿದು ಮೃತಪಟ್ಟ ಘಟನೆ ನಡೆದಿದೆ. ಮೃತರು ಶಂಕರ ಪೂಜಾರಿ (40) ಅವರು ಅ. 15ರಂದು ಅಪರಾಹ್ನ 3.30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮತ್ತೀಬೇರು ಎಂಬಲ್ಲಿರುವ ಅಡಕೆ ತೋಟಕ್ಕೆ ಹಸಿರುಸೊಪ್ಪು ಕಡಿಯಲು ಮರವನ್ನು ಹತ್ತಿದ್ದಾಗ, ಹೆಜ್ಜೇನುಗಳು ಕಡಿದು ಗಾಯಗೊಂಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಅ. 17ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕೆಎಂಸಿಯ ವೈದ್ಯರು ಚಿಕಿತ್ಸೆ ನೀಡಿದ್ದರೂ, ಗಾಯಾಳು ಮನೆಯವರಿಗೆ ಕೆಎಂಸಿಯ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಅಲ್ಲಿ ಶಂಕರ ಪೂಜಾರಿ ಅವರು ಗುರುವಾರ ಸಂಜೆ 7.50 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಸಹೋದರ ಮಂಜುನಾಥ ಪೂಜಾರಿ ಅವರು ಶಂಕರನಾರಾಯಣ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.