ಅಧಿಕಾರ ಸ್ವೀಕಾರ
ಮಂಗಳೂರು: ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿಯಾಗಿ ಆರ್. ಆನಂದ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಶೇಷ ಸಾಮಾನ್ಯ ಸಭೆ
ಮಂಗಳೂರು: ಮಂಗಳೂರು ತಾಲೂಕು ಪಂಚಾಯಿತಿನಲ್ಲಿ 28 ರಂದು ಬೆಳಗ್ಗೆ 11 ಗಂಟೆಗೆ ಸ್ಥಾಯಿ ಸಮಿತಿಗಳ ರಚನೆ ಬಗ್ಗೆ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ.
ನನ್ನ ಹುಟ್ಟಿದ ನಾಡು ಎಂದೆಂದೂ ಕನ್ನಡ ನಾಡು
ಪೆರಡಾಲ (ಕೇರಳ): ನಾನು ಹುಟ್ಟಿದ ಪ್ರದೇಶ ಎಂದೆಂದೂ ಕನ್ನಡನಾಡು ಎಂದು ಕವಿರತ್ನ ಕಯ್ಯಾರ ಕಿಂಞಣ್ಣ ರೈ ಹೇಳಿದರು.
ಮುಂಬಯಿ ಲಕ್ಷ್ಮೀ ಛಾಯಾ ವಿಚಾರ ವೇದಿಕೆ ವತಿಯಿಂದ ಶನಿವಾರ 'ಜಯಂತಿ ಬಿ.ಎಸ್. ಕುರ್ಕಾಲ್ ಸಾಹಿತ್ಯ' ಪ್ರಶಸ್ತಿಯನ್ನು ಸ್ವಗೃಹದಲ್ಲಿ ಶನಿವಾರ ಸ್ವೀಕರಿಸಿ ಮಾತನಾಡಿದರು. ನಾನು ಹುಟ್ಟಿದ್ದ ಕಾಸರಗೋಡು ಪೆರಡಾಲದಲ್ಲಿ ಆಗಿದ್ದರೂ ಹುಟ್ಟುವಾಗ ಅದು ಮಂಗಳೂರಿಗೆ ಸೇರಿತ್ತು. ಮತ್ತೆ ಕರ್ನಾಟಕಕ್ಕೆ ಸೇರಬೇಕು ಎಂದರು.
ಈ ವಯಸ್ಸಿನಲ್ಲಿ ನಾನು ಯುವಕನ ಹಾಗೆ ಮಾತನಾಡುವ ಅಪೇಕ್ಷೆ ನೀವು ಹೊಂದಿರುವುದು ದೇವರ ಆಶೀರ್ವಾದ. ಆದರೆ ಬೇರೆಯವರನ್ನು ಕರೆದು ಗೌರವಿಸಿದ್ದರೆ ಅವರು ಮನಸ್ಸಿಗೆ ಮುದ ನೀಡುವ ಮಾತು ಆಡುತ್ತಿದ್ದರು. ನನಗೆ ಈ ವಯಸ್ಸಿನಲ್ಲಿ ಯಾವುದು ನೀತಿ, ಯಾವುದು ದುರ್ನೀತಿ ಎಂದು ವಿವರಿಸಿ ಹೇಳಲು ಸಾಧ್ಯವಿಲ್ಲ. ಕನ್ನಡನಾಡಲ್ಲಿ ಎಂದೆಂದೂ ಕನ್ನಡ ಮೊಳಗಲಿ, ಎಲ್ಲರಿಗೂ ಶುಭಮಂಗಳವಾಗಲಿ ಎಂದರು.
ಸನ್ಮಾನಿಸಿದ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, 'ಕಿಂಞಣ್ಣ ರೈಗಳ ಐಕ್ಯಗಾನವನ್ನು ಇದಿನಬ್ಬರು ಹಾಡಿ ಪಸರಿಸಿದರು. ಇಂಥ ಗಾನಗಳಿಂದ ರೈಗಳು ಅಜರಾಮರ ಆಗಿದ್ದಾರೆ. ರಾಷ್ಟ್ರಕವಿ ಪುರಸ್ಕಾರಕ್ಕೆ ನೂರಕ್ಕೆ ನೂರು ಅರ್ಹರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ನಾವು ಕಾಡಿ ಬೇಡಿ ಏಕೆ ಕೊಡಬೇಕು. ಸರ್ಕಾರದ ಬಿರುದು ಬಾವಲಿಗಳಿಂದ ದೊಡ್ಡವರಾಗುವುದಿಲ್ಲ. ರೈಗಳು ಸ್ವಯಂ ದೊಡ್ಡವರು' ಎಂದರು.
32 ಭಾಷೆಗಳ ವಿದ್ವಾಂಸ ಮಂಜೇಶ್ವರ ಗೋವಿಂದ ಪೈಗಳಿಗೆ ನೀಡಿದ ರಾಷ್ಟ್ರಕವಿ ಪ್ರಶಸ್ತಿ ಅವರ ವಿದ್ವತ್ ಎದುರು ಕಾಲಕಸ. ಆದರೆ ಅಂಥವರಿಗೆ ಬಿರುದು ನೀಡುವಾಗ ನಮ್ಮಂಥವರಿಗೆ ಖುಷಿ ಆಗುತ್ತದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ರೈಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ಜೀವಿತಾವಧಿಯಲ್ಲಿಯೇ ನೀಡಬೇಕು. ದಿವಂಗತರಾದ ಮೇಲೆ ಇಂದ್ರ ಚಂದ್ರ ಎಂದು ಬಿರುದು ಬಾವಲಿ ನೀಡುವ ಅಗತ್ಯ ಇಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬುದು ಕಿಂಞಣ್ಣ ರೈಗಳ ಗುರಿ. ಇದೀಗ ರೈಗಳಿಗೆ ಕರ್ನಾಟಕ ರತ್ನ ನೀಡಬೇಕು ಎಂಬುದು ನಮ್ಮೆಲ್ಲರ ಒತ್ತಾಸೆ ಎಂದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಕಾಸರಗೋಡು ಕರ್ನಾಟಕಕ್ಕೆ ಎಂದೂ ಸೇರಿಲ್ಲ, ಆದರೆ ಕಾಸರಗೋಡಲ್ಲಿ ಹುಟ್ಟಿದ ನಾನು ಕರ್ನಾಟಕದ ಪುತ್ತೂರಿಗೆ ಹೋಗಿ ಶಾಸಕಿಯಾಗಿದ್ದೇನೆ. ಕಿಂಞಣ್ಣ ರೈಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭ ಫಲಪುಷ್ಪ ಪತ್ರಿಕೆ ನಿವೃತ್ತ ಸಂಪಾದಕ ಬಿ.ಎಸ್.ಕುರ್ಕಾಲ್ ಸಂಪಾದಿಸಿದ ಕವಿರತ್ನ ಕಯ್ಯಾರ ಕೃತಿಯನ್ನು ಏರ್ಯ ಲಕ್ಷ್ಮೀನಾರಾಯಣ ಆಳ್ವ ಬಿಡುಗಡೆ ಗೊಳಿಸಿದರು.
ಪೂರ್ಣಿಮಾ ಕಿಣಿ ಪ್ರಾರ್ಥಿಸಿದರು. ವಿಜಯಬ್ಯಾಂಕ್ ನಿವೃತ್ತ ಎಜಿಎಂ ಕಡಾರು ಐತ್ತಪ್ಪ ಶೆಟ್ಟಿ ಕವನ ವಾಚಿಸಿದರು. ಕುರ್ಕಾಲ್ ಭಾಸ್ಕರ ಶೆಟ್ಟಿ, ನಕ್ರೆ ಸುರೇಂದ್ರ ಶೆಟ್ಟಿ, ಜಿ.ಕೆ.ಭಟ್ ಸೇರಾಜೆ ಇದ್ದರು. ಕಿಂಞಣ್ಣ ರೈಗಳು ಪುತ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಪೇಟೆಮನೆ ಪ್ರಕಾಶ್ ನಿರೂಪಿಸಿದರು.