ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಡೋ ಸಂತ್ರಸ್ತರಿಗೆ ಐದು ಅಂಶಗಳ ಕಾರ್ಯಕ್ರಮ

Rashmi Kasaragodu
Updated On : 27 Oct 2013, 2:12 am

ಉಪ್ಪಿನಂಗಡಿ: ಎಂಡೋ ಸಂತ್ರಸ್ತರ ಪುನರ್ವಸತಿ ಸಲುವಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ ರು. 20 ಕೋಟಿ ಅನುದಾನ ವಿನಿಯೋಗದ ಕುರಿತು ದ.ಕ. ಜಿಲ್ಲಾ ಎಂಡೋ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಸಮಾಲೋಚನೆ ನಡೆಸಿದರು.
ವಿಧಾನಸೌಧದ ಸಚಿವಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮೊದಲ ಹಂತದ 5 ಅಂಶಗಳ ಕಾರ್ಯಕ್ರಮಕ್ಕೆ ರೂಪುರೇಷೆ ಮಾಡಲಾಯಿತು.
ಐದು ಅಂಶಗಳು:
- ಎಂಡೋ ಸಂತ್ರಸ್ತರಿಗೆ ಮಾಸಾಸನ ಹೆಚ್ಚಳ
-ಸಂತ್ರಸ್ತರ ಆರೋಗ್ಯ ತಪಾಸಣೆ ಸಲುವಾಗಿ ಸಂಚಾರಿ ಕ್ಲಿನಿಕ್.
- ಪಾಲನಾ ಕೇಂದ್ರಗಳಲ್ಲಿ ಇರುವ ಪೀಡಿತರನ್ನು ಫಿಜಿಯೋಥೆರಪಿ ಮಾಡಿಸುವುದರೊಂದಿಗೆ ಅವರ ಬೆಳವಣಿಗೆಗೆ ಪೂರಕವಾಗಿ ಕೌಶಲ್ಯ ತರಬೇತಿ ನೀಡಿ ಸ್ವಾವಲಂಬಿಯಾಗಲು ಪ್ರೇರಣೆ ನೀಡುವುದು.
- ಮನೆಗಳಲ್ಲಿ ಮಲಗಿದಲ್ಲೇ ಇರುವ ಪೀಡಿತರ ಕಾಯಿಲೆಗಳನ್ನು ಪತ್ತೆ ಮಾಡುವುದು. ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು. ಪೀಡಿತರ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದ ರೀತಿಯಲ್ಲಿ ಇದ್ದರೆ ಖಾಸಗಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಸ್ಮಾರ್ಟ್ ಕಾರ್ಡ್ ಮೂಲಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುವುದು.
- ದ.ಕ. ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಒತ್ತು ಕೊಡುವುದು.
ಪೂರ್ಣ ಪ್ರಮಾಣದ ಪುನರ್ವಸತಿ ಆಗಲಿ: ಸಭೆಯಲ್ಲಿ ದ.ಕ. ಜಿಲ್ಲಾ ಎಂಡೋ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಮಾತನಾಡಿ, ಸರ್ವ ರೀತಿಯ ಸೌಲಭ್ಯಗಳನ್ನು ನೀಡಬೇಕಾದರೆ ಪೂರ್ಣ ಪ್ರಮಾಣದ ಪುನರ್ವಸತಿ ಕೇಂದ್ರ ಆಗಬೇಕು. ಅಲ್ಲಿ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿದರೆ ಎಂಡೋ ಸಂತ್ರಸ್ತರು ಮತ್ತು ಪೀಡಿತರಲ್ಲಿ  ಕಾಡುವ ಶೇ.50ರಷ್ಟು ಸಮಸ್ಯೆಗಳು ಬಗೆಹರಿದಂತೆ ಎಂದರು.
ಪರಿಹಾರ ಧನ ನೀಡಿ: ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಮಾತನಾಡಿ, ಎಂಡೋ ಸಂತ್ರಸ್ತರು ಬಹಳ ಸಮಯದಿಂದ ಆರ್ಥಿಕ ಸಂಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಪೂರಕ ಸ್ಪಂದನ ದೊರಕಬೇಕಾದರೆ ಪರಿಹಾರ ಧನ ನೀಡಬೇಕು ಎಂದು ಪ್ರತಿಪಾದಿಸಿದರು.
ದ.ಕ. ಜಿಲ್ಲಾ ಎಂಡೋ ಹೋರಾಟ ಸಮಿತಿ ಕಾರ್ಯದರ್ಶಿ ಜಯಕರ ಪೂಜಾರಿ ಮಾತನಾಡಿ, ತಾತ್ಕಾಲಿಕ ಎಂಡೋ ಪಾಲನಾ ಕೇಂದ್ರ ಆರಂಭ ಆಗುವಾಗ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೇಂದ್ರಕ್ಕೆ ಬರುತ್ತಿದ್ದರು. ಅಲ್ಲಿ ಬರುವ ಪೀಡಿತರಲ್ಲಿ ಆದಂತಹ ಬದಲಾವಣೆಯನ್ನು ಗಮನಿಸಿರುವ ಉಳಿದ ಸಂತ್ರಸ್ತರು ತಮ್ಮ ಮಕ್ಕಳನ್ನೂ ಸೇರಿಸಲು ಮುಂದಾದರು. ಹೀಗಾಗಿ ಪೀಡಿತರ ಬದುಕಿನಲ್ಲಿ ತುಸು ನೆಮ್ಮದಿ ಕಾಣುತ್ತಿದ್ದೇವೆ. ಮುಂದೆ ಇದು ಇನ್ನಷ್ಟು ಸೌಲಭ್ಯಗಳೊಂದಿಗೆ ಮುನ್ನಡೆಯುವಂತಾಗಬೇಕು ಎಂದರು.
ಪತ್ರಕರ್ತ ಸಿದ್ದಿಕ್ ನೀರಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಮಾತನಾಡಿದರು. ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ದ.ಕ. ಜಿಲ್ಲಾ ಮಲೇರಿಯಾ ಅಧಿಕಾರಿ ಅರುಣ್ ಕುಮಾರ್ ಮತ್ತಿತರ ಇಲಾಖೆಯ ಅಧಿಕಾರಿಗಳು ಇದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಹುಲ್ ಹಮೀದ್, ಉಪ್ಪಿನಂಗಡಿ ಕಾಂಗ್ರೆಸ್ ಕಾರ್ಮಿಕ ಘಟಕದ ಶಫೀಕ್ ಅರಫ, ಆಲಂಕಾರು ಎಂಡೋ ಹೋರಾಟ ಸಮಿತಿಯ ರಾಮಮೋಹನ ರೈ, ಪದ್ಮನಾಭ ಗೌಡ, ಕೊಕ್ಕಡ ಸಮಿತಿಯ ನಾರಾಯಣ ಗೌಡ ಮತ್ತಿತರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement