ಮಂಗಳೂರು: 29ರಿಂದ 'ಶ್ರೀಯಾನ್ಸ್' ಉತ್ಸವ
ಮಂಗಳೂರು: ವಳಚ್ಚಿಲ್ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಅ. 29 ಮತ್ತು 30 ರಂದು ಮ್ಯಾನೇಜ್ಮೆಂಟ್ ಫೆಸ್ಟ್ 'ಶ್ರೀಯಾನ್ಸ್-2013' ನಡೆಯಲಿದೆ. ಕಾರ್ಯಕ್ರಮವನ್ನು ಭಾರತ್ ಗ್ರೂಫ್ನ ಆಡಳಿತ ನಿರ್ದೇಶಕ ಅನಂತ್ ಜಿ ಪೈ ಉದ್ಘಾಟಿಸುವರು. ಶ್ರೀನಿವಾಸ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸುವರು. ಶ್ರೀನಿವಾಸ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಎ. ಶ್ರೀನಿವಾಸ ರಾವ್, ಕಾರ್ಯದರ್ಶಿ ಎ. ಮಿತ್ರ ಎಸ್ ರಾವ್, ಶ್ರೀನಿವಾಸ್ ಹೊಟೇಲ್ ನಿರ್ದೇಶಕ ಎ. ವಿಜಯಲಕ್ಷ್ಮಿ ಆರ್ ರಾವ್ ಪಾಲ್ಗೊಳ್ಳುವರು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಮ್ಯಾನೇಜ್ಮೆಂಟ್ಗೆ ಸಂಬಂಧಪಟ್ಟ ಮಾರ್ಕೆಟಿಂಗ್, ಫೈನಾನ್ಸ್, ಮಾನವ ಸಂಪನ್ಮೂಲ ಮತ್ತು ವ್ಯವಹಾರಿಕ ರಸಪ್ರಶ್ನೆ ಹಾಗೂ ಬೆಸ್ಟ್ ಮ್ಯಾನೇಜರ್ ಎಂಬ ಸ್ಪರ್ಧೆ ನಡೆಯಲಿದೆ. ರಾಜ್ಯದ 25 ಎಂಬಿಎ ಕಾಲೇಜುಗಳಿಂದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದರು. ಗೋಷ್ಠಿಯಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ಹರಿಪ್ರಕಾಶ್ ಯು.ಪಿ., ಮ್ಯಾನೇಜ್ಮೆಂಟ್ ಫೆಸ್ಟ್ ಸಂಚಾಲಕ ಪ್ರೊ. ಕೃಷ್ಣ ಶೆಣೈ, ಪ್ರೊ. ಶೋಭಾ, ವಿದ್ಯಾರ್ಥಿ ಸಂಯೋಜಕ ಚಂದ್ರನ್ ಇದ್ದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆಡಳಿತಕ್ಕೆ ಹೈಕೋರ್ಟ್ ಸಮನ್ಸ್
ಬ್ರಹ್ಮಾವರ: ಹೈಕೋರ್ಟ್ ಆದೇಶ ಧಿಕ್ಕರಿಸಿದ ಇಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಇದೀಗ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಕಾರ್ಖಾನೆ ಕಾರ್ಮಿಕರಿಗೆ ಕೊಡಬೇಕಾದ ವೇತನ ಮತ್ತು ಇತರ ಸೌಲಭ್ಯಗಳ ಪಾವತಿಯನ್ನು 6 ತಿಂಗಳ ಕಾಲಮಿತಿಯೊಳಗೆ ಪಾವತಿಸುವಂತೆ 2010 ಆ.24ರಂದು ಹೈಕೋರ್ಟ್ ರಿಟ್ ಆದೇಶ (ಸಂಖ್ಯೆ 19663/ 2004) ನೀಡಿತ್ತು. ಕಾರ್ಖಾನೆಯ ಆಡಳಿತ ವರ್ಗವು ನ್ಯಾಯಾಲಯದ ಈ ಆದೇಶ ಜಾರಿಗೊಳಿಸದೆ ಧಿಕ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘಟನೆ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ದಾವೆ (ಸಂಖ್ಯೆ 1030/11) ದಾಖಲಿಸಿತ್ತು. ದಾವೆಯನ್ನು ಪರಿಶೀಲಿಸಿದ ನ್ಯಾಯಾಲಯವು ಪೊಲೀಸ್ ಇಲಾಖೆ ಮುಖಾಂತರ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ಕಾರ್ಮಿಕರ ಸಂಘದ ಅಧ್ಯಕ್ಷ ಎಸ್. ಭಾಸ್ಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎಸ್. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.