'ಮಂಗಳೂರು ಟ್ರಾನ್ಸ್ಪೋರ್ಟ್ ಕಂಟ್ರಾಕ್ಟರ್, ಏಜೆಂಟರುಗಳ ಎಸೋಸಿಯೇಶನ್' ಉದ್ಘಾಟನೆ
ಮಂಗಳೂರು: ಏಜೆಂಟರ್ಗಳ ಹಿತಾಸಕ್ತಿ ಕಾಪಾಡಲು ಹಾಗೂ ಟ್ರಾನ್ಸ್ಪೋರ್ಟ್ ವ್ಯವಹಾರಕ್ಕೆ ವ್ಯವಸ್ಥಿತ ರೂಪ ನೀಡುವ ನಿಟ್ಟಿನಲ್ಲಿ ಅ. 27 ರಂದು ಬೆಳಗ್ಗೆ 9.30ಕ್ಕೆ ಕುಳಾಯಿ ಮಹಿಳಾ ಮಂಡಲದಲ್ಲಿ 'ಮಂಗಳೂರು ಟ್ರಾನ್ಸ್ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜೆಂಟರುಗಳ ಅಸೋಸಿಯೇಶನ್' ಉದ್ಘಾಟನೆಗೊಳ್ಳಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಸಂಘವನ್ನು ಉದ್ಘಾಟಿಸುವರು. ಮಂಗಳೂರು ಉತ್ತರ ಶಾಸಕ ಬಿ.ಎ. ಮೈದಿನ್ ಬಾವ ಅಧ್ಯಕ್ಷತೆ ವಹಿಸುವರು. ಸಂಘದ ಗೌರವಾಧ್ಯಕ್ಷ ವಕೀಲ ಪಿ.ಪಿ. ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪುರುಷೋತ್ತಮ ಚಿತ್ರಾಪುರ, ರಘುವೀರ ಪಣಂಬೂರು ಪಾಲ್ಗೊಳ್ಳುವರು ಎಂದು ಅಸೋಸಿಯೇಶನ್ ಅಧ್ಯಕ್ಷ ಚಿತ್ತರಂಜನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಘದ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಸುರೇಶ್ ಶೆಟ್ಟಿ, ವಿನೋದ್ ಜೆ.ಜೆ.ವಾಸ್, ಎನ್.ಪಿ. ನವೀನ್, ಪ್ರಧಾನ ಕಾರ್ಯದರ್ಶಿ ಹರ್ಷದ್ ಹುಸೈನ್, ಜತೆ ಕಾರ್ಯದರ್ಶಿಯಾಗಿ ರವೀಂದ್ರ ಕೆ, ಯೋಗಿಶ್ ಶೆಟ್ಟಿ, ಕಿರಣ್ ಕುಮಾರ್, ಖಜಾಂಚಿ- ಗಂಗಾಧರ, ಅಬ್ದುಲ್ ನಜೀರ್, ಸಲಹಾ ಸದಸ್ಯರಾಗಿ ಪಿ.ಎಂ. ಹಸನ್, ಮನೋಜ್ ಜಲನ್ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ನಾಳೆ ಪ್ರತಿಭಟನೆ
ಮಂಗಳೂರು: ನೀರುಮಾರ್ಗ ಮಲ್ಲೂರಿನಲ್ಲಿ ಇತ್ತೀಚೆಗೆ ಹಿಂದುಗಳ ಮೇಲೆ ನಡೆದ ಹಲ್ಲೆ ಮತ್ತು ದರೋಡೆ ಪ್ರಕರಣ ಖಂಡಿಸಿ ಹಿಂದೂ ಸಂರಕ್ಷಣಾ ಸಮಿತಿ ವತಿಯಿಂದ ಅ. 28 ರಂದು ಬೆಳಗ್ಗೆ 10ಕ್ಕೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮುಂಭಾಗದ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಸಂದರ್ಭ ಬೈತುರ್ಲಿಯಿಂದ ನೀರುಮಾರ್ಗವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪ್ರಕಾಶ್ ಆಳ್ವ ತಿಳಿಸಿದ್ದಾರೆ.