ಶ್ರೀಗಂಧ ಕಳ್ಳ ಸಾಗಾಟ ಆರೋಪಿಗೆ 5 ವರ್ಷ ಕಠಿಣ ಸಜೆ, 50 ಸಾವಿರ ದಂಡ
ಮಂಗಳೂರು: ಶ್ರೀಗಂಧ ಕಳ್ಳ ಸಾಗಾಟ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿ ಮೂಡುಬಿದರೆ ಪಲ್ಲಡ್ಕದ ಯೋಗೀಶ್ ಯಾನೆ ರಮೇಶ್ (23) 50 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 1 ವರ್ಷ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶ ಚೌಡಾಪುರ್ಕರ್ ಅರುಣ್ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. 2009ರ ಸೆ.14ರಂದು ಬೈಕ್ನಲ್ಲಿ 12 ಸಾವಿರ ಮೌಲ್ಯದ ಶ್ರೀಗಂಧ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು. ಸಾರ್ವಜನಿಕ ಅಭಿಯೋಜಕ ಕೆ.ಪುಷ್ಪರಾಜ್ ವಾದ ಮಂಡಿಸಿದ್ದಾರೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಮೂಲ್ಕಿ: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಲಂಜೆ ಎಂಬಲ್ಲಿ ನಡೆದಿದೆ. ಗೀತಾ (36) ಮೃತರು. ಅವರ ಪತಿ ತೀರಿ ಹೋದ ಬಳಿಕ ಕಳೆದ 12 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಶನಿವಾರ ಮನೆಯ ಅಡುಗೆ ಮನೆಯ ಫಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಮೂಲ್ಕಿ: ಹಳೆಯಂಗಡಿಯ ಕೊಪ್ಪಲ ನಿವಾಸಿ ಸೀತಾರಾಮ ಸಫಳಿಗ (55) ತೆಂಗಿನಮರದಿಂದ ಬಿದ್ದು ಶನಿವಾರ ಮೃತಪಟ್ಟಿದ್ದಾರೆ. ಹಳೆಯಂಗಡಿಯ ತೋಟವೊಂದರಲ್ಲಿ ತೆಂಗಿನ ಮರ ಹತ್ತಿ ತೆಂಗಿನಕಾಯಿ ತೆಗೆಯುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.