ಸರಗಳ್ಳತನ: ಇಬ್ಬರು ಇರಾನ್ ಯುವಕರ ಸೆರೆ
ಉಡುಪಿ: ಉಡುಪಿ ಜಿಲ್ಲೆಯ ಪೊಲೀಸರು ಸರಗಳ್ಳತನದ ಜಾಲವೊಂದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರಣಿ ಸರಗಳ್ಳತನ ನಡೆಸಿದ ಇಬ್ಬರು ವಿದೇಶಿಯರನ್ನು ಉಡುಪಿಯ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಇನ್ನಿಬ್ಬರು ಯುವಕರು ತಪ್ಪಿಸಿಕೊಂಡಿದ್ದಾರೆ.
ಆರೋಪಿಗಳು ಇರಾನ್ ದೇಶದ ನಿವಾಸಿಗಳಾಗಿದ್ದು, ಅವರು ಸರಗಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದು ಉತ್ತರ ಕನ್ನಡದಲ್ಲಿ ವಾಸವಾಗಿದ್ದರು.
ಅವರು ಶುಕ್ರವಾರ ಭಟ್ಕಳ, ಕಾರವಾರ ಮುಂತಾದ ಕಡೆಗಳಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ಗಳಲ್ಲಿ ಸಂಚರಿಸುತ್ತಾ ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಎಗರಿಸಿಕೊಂಡು ಪರಾರಿಯಾಗಿದ್ದರು.
ಶನಿವಾರ ಕುಂದಾಪುರದಲ್ಲಿ, ಉಡುಪಿಯ ನಿಟ್ಟೂರಿನಲ್ಲಿ ಮತ್ತು ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿಯೂ ಇದೇ ರೀತಿ ಮಹಿಳೆಯರ ಸರಗಳನ್ನು ಅಪಹರಿಸಿದ್ದರು. ಈ ಮೂರು ಘಟನೆಯ ಬಗ್ಗೆ ಮಹಿಳೆಯರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಉಡುಪಿಯ ಘಟನೆಗಳು ನಡೆದ ಕೆಲವೇ ನಿಮಿಷಗಳಲ್ಲಿ ದೂರು ದಾಖಲಾಗಿದ್ದರಿಂದ ಪೊಲೀಸರು ಉಡುಪಿ ಹೊರವಲಯಗಳಲ್ಲಿ ನಾಕಾಬಂಧಿ ನಡೆಸಿದ್ದರು.
ಕಟಪಾಡಿಯ ಸಮೀಪ ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಸಾಗುತ್ತಿದ್ದ, ಉಡುಪಿಯವರು ಅಥವಾ ಭಾರತೀಯರಂತಿಲ್ಲದ ವ್ಯಕ್ತಿಗಳಿಬ್ಬರ ಬಗ್ಗೆ ಪೊಲೀಸರಿಗೆ ಅನುಮಾನ ಬಂತು.
ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗುತ್ತಿರುವ ಸುಳಿವು ಸಿಕ್ಕ ಆರೋಪಿಗಳು ಬೈಕಿನಲ್ಲಿ ವೇಗವಾಗಿ ತಪ್ಪಿಸಿಕೊಂಡರು. ಕೊನೆಗೆ ಕಟಪಾಡಿಯ ಹೊರಭಾಗದ ರಸ್ತೆಯಲ್ಲಿ ಇಬ್ಬರು ವಿದೇಶಿಯರು ಬೈಕನ್ನು ಎಲ್ಲೋ ಬಿಟ್ಟು ನಡೆದುಕೊಂಡು ಹೋಗುತ್ತಿದ್ದು ಪೊಲೀಸರನ್ನು ಕಂಡು ಮರೆಯಾಗಲು ಯತ್ನಿಸಿದರು. ತಕ್ಷಣ ಪೊಲೀಸರು ಅವರ ಮೇಲೆ ಮುಗಿಬಿದ್ದು ಬಂಧಿಸಿದಾಗ ಅವರ ಬಳಿ ಚಿನ್ನಾಭರಣಗಳಿರುವುದು ಪತ್ತೆಯಾಗಿ ಅವರೇ ಆರೋಪಿಗಳೆಂದು ಸಾಬೀತಾಗಿದೆ. ಆದರೆ, ಅವರೊಂದಿಗಿದ್ದ ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ.
ಉಡುಪಿ ವೃತ್ತ ನಿರೀಕ್ಷಕ ಮಾರುತಿ ನಾಯಕ್, ನಗರ ಠಾಣೆಯ ಎಸೈ ಮಧು ಮತ್ತು ಸುಮಾರು 200ಕ್ಕೂ ಹೆಚ್ಚು ಪೊಲೀಸರು ಈ ಸಿನೀಮಿಯಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲೆಯಲ್ಲಿ ಕಳೆದ 2- 3 ವರ್ಷಗಳಲ್ಲಿ ನೂರಕ್ಕೂ ಸರಗಳ್ಳತನದ ಪ್ರಕರಣಗಳು ನಡೆದಿವೆ. ಇದುವರೆಗೆ ಪೊಲೀಸರಿಗೆ ಅರೋಪಿಗಳನ್ನು ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ.
ಆದರೆ, ಸಾಧಾರಣವಾಗಿ ಉಡುಪಿಯಲ್ಲಿ ಸರಗಳ್ಳರು ತಾವು ಪೊಲೀಸರು ಎಂದು ಹೇಳಿ ಅಮಾಯಕ ಮಹಿಳೆಯರನ್ನು ನಂಬಿಸಿ ಉಪಾಯದಿಂದ ಚಿನ್ನಾಭರಣಗಳನ್ನು ದೋಚುತ್ತಿದ್ದರು, ಅವರೆಲ್ಲಾ ಕನ್ನಡ ಮಾತನಾಡುತ್ತಿದ್ದರು.
ಆದ್ದರಿಂದ ಉಡುಪಿಯಲ್ಲಿ ಈ ಹಿಂದೆ ನಡೆದ ಸರಗಳ್ಳತನದ ಪ್ರಕರಣಗಳ ಆರೋಪಿಗಳು ಕನ್ನಡಬಲ್ಲ ಸ್ಥಳೀಯರು, ವಿದೇಶಿಯರಲ್ಲ ಎಂದು ಹೇಳಲಾಗುತ್ತಿದೆ.
ಆರೋಪಿಗಳ ತನಿಖೆ ಪೂರ್ಣಗೊಂಡಿಲ್ಲ ಮತ್ತು ಸರ ಕಳೆದುಕೊಂಡ ಮಹಿಳೆಯರು ಅವರನ್ನು ಇನ್ನೂ ಗುರುತಿಸಿರದ ಕಾರಣ ಅವರ ಹೆಸರು ಅಥವಾ ಫೊಟೋಗಳನ್ನು ಪ್ರಕಟಿಸದಂತೆ ಎಸ್ಪಿ ಡಾ. ಬೋರಲಿಂಗಯ್ಯ ಅವರು ಮಾಧ್ಯಮಗಳಿಗೆ ಸೂಚನೆ ನೀಡಿದ್ದಾರೆ.
ಸರಗಳ್ಳತನಕ್ಕೆ ಒಳಗಾದವರು..
ಕುಂದಾಪುರದಲ್ಲಿ ಸಾಲಿಗ್ರಾಮದ ನಿವಾಸಿ ರಾಮ ಮಂದಿರದ ಬಳಿ ಲಲಿತಾ ಎಂಬವರು ರು. 50 ಸಾವಿರ, ಉಡುಪಿಯ ನಿಟ್ಟೂರು ನಿವಾಸಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರು. 70 ಸಾವಿರ ಮತ್ತು ಕುಂಜಿಬೆಟ್ಟಿನ ಶಾಂತಾ ಉಪಾಧ್ಯಾಯ ಅವರು ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ರು. 50 ಸಾವಿರ ಮೌಲ್ಯದ ಸರಗಳನ್ನು ಕಳೆದುಕೊಂಡಿದ್ದಾರೆ. ಮೂರು ಘಟನೆಗಳು ದೇವಾಲಯಗಳ ಬಳಿ ನಡೆದಿವೆ ಎಂಬುದು ಗಮನಾರ್ಹ.