ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಾಹುಲ್ 'ಐಎಸ್ಐ' ಹೇಳಿಕೆ ವಿರುದ್ಧ ಕೇಸ್

Rashmi Kasaragodu
Updated On : 29 Oct 2013, 1:19 am

ಪಡುಬಿದ್ರಿ: 'ಪಾಕಿಸ್ತಾನದ ಐಎಸ್ಐ ಸಂಘಟನೆ ಭಾರತದ ಮುಸ್ಲಿಮರ ಸಂಪರ್ಕದಲ್ಲಿದೆ' ಎಂದು ಇತ್ತೀಚೆಗೆ ಹೇಳಿರುವ ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಉಡುಪಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಅಹಮ್ಮದ್ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಕೋಮು ಗಲಭೆ ಸಂಭವಿಸಿದ್ದು, ಈ ಗಲಭೆಯ ನಂತರ ಸಂತ್ರಸ್ತ ಮುಸ್ಲಿಮರನ್ನು ಪಾಕಿಸ್ತಾನದ ಐಎಸ್ಐ ಸಂಸ್ಥೆ ಸಂಪರ್ಕಿಸಿದೆ ಎಂದು ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು.
ಅಲ್ಲದೆ, ಈ ವಿಷಯವನ್ನು ತನಗೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ ಎಂದೂ ಹೇಳಿದ್ದರು. ಇದೊಂದು ಬಾಲಿಶ ಹೇಳಿಕೆಯಾಗಿದ್ದು, ಈ ದೇಶದ ಜಾತ್ಯತೀತ ಬಾಂಧವ್ಯ ಕೆಡಿಸಲು, ಕೋಮುಗಲಭೆ ಪ್ರಚೋದಿಸಲು ರಾಹುಲ್ ಗಾಂಧಿ ಮಾಡಿದ ಹುನ್ನಾರವಾಗಿದೆ. ಭಾರತದ ಮುಸ್ಲಿಮರನ್ನು ಐಎಸ್ಐ ಸಂಪರ್ಕಿಸಿರುವುದು ಸುಳ್ಳು ಹಾಗೂ ಕೇಂದ್ರ ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಉತ್ತರ ಪ್ರದೇಶದ ರಾಜ್ಯಪಾಲರೇ ಸ್ಪಷ್ಟಪಡಿಸಿದ್ದಾರೆ.
ಈ ವಿದ್ಯಮಾನದಿಂದ ದೇಶದ ಮುಸ್ಲಿಮರನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಆದ್ದರಿಂದ ಈ ಕೋಮು ಪ್ರಚೋದಕ ಹೇಳಿಕೆಗಾಗಿ ರಾಹುಲ್ ಗಾಂಧಿ ಅವರನ್ನು ಐಪಿಸಿ ಸೆಕ್ಷನ್ 153ಎ ಕಾಲಂನಡಿ ಬಂಧಿಸಿ ಪ್ರಕರಣ ದಾಖಲಿಸಬೇಕು ಎಂದು ಗುಲಾಂ ಮಹಮ್ಮದ್ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುವ ಸಂದರ್ಭ ಗುಲಾಂ ಅವರೊಂದಿಗೆ ಎಂ.ಎಚ್. ಅಬ್ದುಲ್ ಖಾದರ್, ಲೋಕೇಶ್ ಶೆಟ್ಟಿ ಮುಂತಾದವರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement