ಉದ್ಯೋಗ ನೀಡುವುದಾಗಿ ಹಣ ಪಡೆದು ವಂಚನೆ
ಮಂಗಳೂರು: ಸೇನೆಯಲ್ಲಿ ಉದ್ಯೋಗ ನೀಡುವುದಾಗಿ ಸಾವಿರಾರು ರುಪಾಯಿ ಹಣ ಪಡೆದು ಬಿಕರ್ನಕಟ್ಟೆ ಕೆರಿಯರ್ ಗೈಡೆನ್ಸ್ ಇನ್‌ಕಾರ್ಪೊರೇಶನ್ ವಿದ್ಯಾರ್ಥಿಗಳಿಗೆ ವಂಚಿಸಿದ ಬಗ್ಗೆ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ. ವಂಚನೆ ವಿರುದ್ಧ ಹಾಸನ ಸಮತ ಸೈನಿಕ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ನಿವೃತ್ತ ಸೈನಿಕ ಕೇರಳದ ಸಂತೋಷ್ ಕುಮಾರ್ ತರಬೇತಿ ಸಂಸ್ಥೆ ಸ್ಥಾಪಿಸಿದ್ದು, ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ. ಮಂಜುನಾಥ್ ಮತ್ತು ಮನೋಜ್ ಎಂಬವರಿಂದ ಕ್ರಮವಾಗಿ 50 ಸಾವಿರ ಮತ್ತು 29 ಸಾವಿರ ಪಡೆದಿದ್ದ. ಆದರೆ ಉದ್ಯೋಗ ನೀಡಿರಲಿಲ್ಲ. ಈ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿ ಸಂತೋಷ್ ಕುಮಾರ್ ಹಣ ವಾಪಸ್ ನೀಡುವುದಾಗಿ ಕರೆ ಮಾಡಿ ತಿಳಿಸಿದ್ದಾನೆ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.
ಹೆತ್ತವರು ಕೈಬಿಟ್ಟ ಮಗು ಸಾವು
ಮಂಗಳೂರು: ಹೆತ್ತವರಿಂದ ಬೇರ್ಪಟ್ಟ 7 ತಿಂಗಳ ಮಗು ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದೆ. 6 ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಸರಗೋಡು ಪಳ್ಳಿಕೆರೆ ರಾಜೇಶ್ ಮತ್ತು ಉಷಾ ಮಗುವನ್ನು ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವಾಪಸ್ ಬಂದಿರಲಿಲ್ಲ. ಬಾಲ ಸಂಜೀವಿನಿ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಮಂಗಳೂರು: ಸೆಂಟ್ರಲ್ ರೈಲು ನಿಲ್ದಾಣದಲ್ಲಿ 40-45 ವರ್ಷ ಪ್ರಾಯದ ಅಪರಿಚಿ ಶವ ಪತ್ತೆಯಾಗಿದೆ. ಕ್ಲೀನಿಂಗ್ ಯಾರ್ಡ್ ಬಳಿ ಶವ ಪತ್ತೆಯಾಗಿದ್ದು, ಕಾಯಿಲೆಯಿಂದ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ.