ಕಳವಾದ ಪರ್ಸ್ ಅಂಚೆ ಡಬ್ಬಿಯಲ್ಲಿ ಪ್ರತ್ಯಕ್ಷ!
ಉಪ್ಪಿನಂಗಡಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಕಳವಾದ ಪರ್ಸ್ ಉಪ್ಪಿನಂಗಡಿ ಅಂಚೆ ಡಬ್ಬದಲ್ಲಿ ನಗದು ರಹಿತ ಪತ್ತೆಯಾಗಿರುವ ಘಟನೆ ಸಂಭವಿಸಿದೆ. ಸೋಮವಾರ ಉಪ್ಪಿನಂಗಡಿಯ ಅಂಚೆ ಡಬ್ಬ ತೆರೆದಾದ ಅದರಲ್ಲಿ ಒಂದು ಪರ್ಸ್ ಕಾಣ ಸಿಕ್ಕಿತು. ಪರಿಶೀಲಿದಾಗ ಚಂದ್ರನ್ ಎಂಬ ಹೆಸರಿನ ವ್ಯಕ್ತಿಗೆ ಸೇರಿದ ಹಲವು ದಾಖಲೆ ಪತ್ರಗಳು ಅದಲ್ಲಿರುವುದು ಕಂಡು ಬಂತು. ಅದರೆ ಚಂದ್ರನ್ ದೂರವಾಣಿ ಸಂಖ್ಯೆ ಅದರಲ್ಲಿ ಇರಲಿಲ್ಲ. ಮತ್ತಷ್ಟು ಜಾಲಾಡಿದಾಗ ದಾಖಲಿಸಲ್ಪಟ್ಟ ಮೊಬೈಲ್ ಸಂಖ್ಯೆಯೊಂದು ಲಭಿಸಿತು. ಉಪ್ಪಿನಂಗಡಿ ಪೋಸ್ಟ್ ಮಾಸ್ಟರ್ ತೀರ್ಥಪ್ರಸಾದ್ ಅವರು ಅಂಚೆ ಡಬ್ಬದಲ್ಲಿ ಪರ್ಸ್ ಲಭಿಸಿರುವ ವಿಚಾರವನ್ನು ಆ ಸಂಖ್ಯೆಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿದ ಚಂದ್ರನ್ ಸ್ನೇಹಿತರಿಗೆ ತಿಳಿಸಿದರು. ಗೆಳೆಯನಿಂದ ವಿಚಾರ ತಿಳಿದು ಆಗಮಿಸಿದ ಚಂದ್ರನ್ ಅಂಚೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ, ಪರ್ಸ್ ಹಿಂತಿರುಗಿಸಿದ ಕಳ್ಳನಿಗೂ ಶ್ಲಾಘಿಸಿ ನಿರ್ಗಮಿಸಿದರು.
ಫಲಿಸಿದ ಪ್ರಾರ್ಥನೆ: ಪುತ್ತೂರು ಬೆಟ್ಟಂಪ್ಪಾಡಿಯ ನಿವಾಸಿ ಚಂದ್ರನ್ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಟೈಲ್ಸ್ ಅಳವಡಿಸಲೆಂದು 7410 ನಗದು ಹಣವನ್ನು ಪರ್ಸ್ನಲ್ಲಿರಿಸಿ ಪುತ್ತೂರಿಗೆ ಹೋಗಿದ್ದರು. ಅಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುವ ಸಂದರ್ಭ ಜನಸಂದಣಿಯ ಲಾಭ ಪಡೆದ ಕಿಸೆಗಳ್ಳ ಅವರ ಪ್ಯಾಂಟ್ ಕಿಸೆಯಲ್ಲಿದ್ದ ಪರ್ಸ್ ಎಗರಿಸಿದ್ದ. ಪರ್ಸ್ನಲ್ಲಿದ್ದ ಹಣ ಕಳ್ಳನ ಪಾಲಾದ ದುಃಖ ಒಂದೆಡೆಯಾದರೆ, ಹಲವು ದಾಖಲೆಗಳು ಪರ್ಸ್ನಲ್ಲಿರುವುದರಿಂದ ಕಂಗಾಲಾದ ಚಂದ್ರನ್, ಪರ್ಸ್ ಒದಗಿಸಿಕೊಡುವಂತೆ ದೇವರಲ್ಲಿ ಪ್ರಾರ್ಥಿಸಿ ಹರಕೆ ಹೇಳಿಕೊಂಡಿದ್ದರು. ಈಗ ಹಣ ಕಳ್ಳನ ಪಾಲಾದರೂ, ದಾಖಲೆಗಳು ಸಿಕ್ಕಿವೆ.
ಜುಗಾರಿ: ಐವರ ಬಂಧನ
ಬಂಟ್ವಾಳ: ಇಲ್ಲಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ನಗರ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಆಟಕ್ಕೆ ಬಳಸಿದ್ದ ನಗದು ರು. 2150 ಹಾಗೂ ನಾಲ್ಕು ಮೊಬೈಲ್, ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ನಗರ ಠಾಣೆ ಎಸ್ಸೈಗಳಾದ ವೆಂಕಟರಮಣ ಗೌಡ ಹಾಗೂ ಕಬಲ್ರಾಜ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.