ಕೋರ್ಟ್ ಹಾಜರಿಗೆ ಭಟ್ಕಳ್ ಮನೆಗೆ ಪತ್ರ ಅಂಟಿಸಿದರು
ಭಟ್ಕಳ: ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ್ ನಿವಾಸಕ್ಕೆ ಎನ್ಐಎ ವಿಶೇಷ ನ್ಯಾಯಾಲಯದ ಘೋಷಣಾ ಪತ್ರ ಅಂಟಿಸಲಾಗಿದೆ. ಎನ್ಐಎ ಅಧಿಕಾರಿಗಳು ಮಂಗಳವಾರ ಭಟ್ಕಳಕ್ಕೆ ಆಗಮಿಸಿ ರಿಯಾಜ್ ಹಾಗೂ ಇಕ್ಬಾಲ್ ಅವರ ನಿವಾಸದ ಎದುರು, ತಹಸೀಲ್ದಾರ ಕಚೇರಿ ಎದುರು ಈ ಘೋಷಣಾ ಪತ್ರ ಅಂಟಿಸಿದ್ದಾರೆ. ಇವರಿಬ್ಬರು ಅಪರಾಧ ಚಟುವಟಿಕೆಗಳ ಆರೋಪ ಎದುರಿಸುತ್ತಿದ್ದು, ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ನಿವಾಸ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಘೋಷಣಾ ಪತ್ರವನ್ನು ಅಂಟಿಸಲಾಗಿದೆ. ಬರುವ ನವೆಂಬರ್ 7ರೊಳಗೆ ದೆಹಲಿಯಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ಘೋಷಣಾ ಪತ್ರದಲ್ಲಿ ಸೂಚಿಸಲಾಗಿದೆ.