ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜುಗಾರಿ: ಆರೋಪಿ ಸೆರೆ

Lingaraj Badiger
Updated On : 30 Oct 2013, 12:33 pm

ಶಿರ್ವ: ಇಲ್ಲಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಬಸ್‌ನಿಲ್ದಾಣ ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆಟಕ್ಕೆ ಬಳಸಲಾದ ರು. 490 ನಗದು ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಯುವತಿ ಆತ್ಮಹತ್ಯೆ
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಯಡ್ತಾಡಿ ಗ್ರಾಮದಲ್ಲಿ ನಡೆದಿದೆ. ಕವಿತಾ (27) ಮೃತರು. ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೆ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಮನೆಯ ಅಡುಗೆ ಕೋಣೆಯ ಜಂತಿಗೆ ಚೂಡಿದಾರ ಶಾಲು ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗೋವಿಂದ ಪೂಜಾರಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಳಿ ಅಂಕ: ನಾಲ್ವರ ಬಂಧನ
ಕಾಪು: ಇಲ್ಲಿನ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಬಬ್ಬುಸ್ವಾಮಿ ದೈವಸ್ಥಾನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಕಾಪು ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 9 ಕೋಳಿ ಹುಂಜ, ರು. 2635 ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
ಚೇರ್ಕಾಡಿ: ಸಿಡಿಲು ಬಡಿದು ಹಾನಿ
ಹೆಬ್ರಿ; ಹೆಬ್ರಿ ಸಮೀಪ ಚೇರ್ಕಾಡಿ ಶಾಲೆ ಸಮೀಪ ಪ್ರಕಾಶ ಕಾಮತ್ ಎಂಬವರ ಮನೆಯ ಬಳಿ ಮರಕ್ಕೆ ಸಿಡಿಲು ಬಡಿ ಮರ ಪೂರ್ಣ ಸುಟ್ಟುಹೋಗಿರುವ ಘಟನೆ ಸೋಮವಾರ ಸಂಭವಿಸಿದೆ. ಅಡ್ಪ ಪರಿಸರದ ಹಲವು ಮನೆಯ ವಿದ್ಯುತ್ ಉಪಕರಣಗಳು, ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಅಪಾರ ಹಾನಿಯಾಗಿದೆ.
ವಶಪಡಿಸಿಕೊಂಡ ಕೋಳಿಗಳ ಏಲಂ
ವಿಟ್ಲ: ಇತ್ತೀಚೆಗೆ ಕುಂಡಡ್ಕ ಎಂಬಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿ ವಶಪಡಿಸಿಕೊಂಡ ಕೋಳಿಗಳನ್ನು ಸೋಮವಾರ ಸಾರ್ವಜನಿಕರ ಸಮ್ಮುಖದಲ್ಲಿ ಏಲಂ ಮಾಡಲಾಯಿತು. ಅಲ್ಲಿ ನಡೆಸಿದ ದಾಳಿಯ ವೇಳೆ 6 ಕೋಳಿಗಳು ಪತ್ತೆಯಾಗಿದ್ದವು. ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಹಾಗೂ ಸಿಬ್ಬಂದಿ ಸಾರ್ವಜನಿಕರ ಸಮ್ಮುಖದಲ್ಲಿ ಆರು ಕೋಳಿಗಳ ಏಲಂ ನಡೆಸಿದರು. ಏಲಂನಲ್ಲಿ ಸುಮಾರು ರು. 3800 ಸಂಗ್ರಹವಾಗಿದೆ.
ಅನುಮಾನಾಸ್ಪದ ವ್ಯಕ್ತಿ ಬಂಧನ
ವಿಟ್ಲ: ಅನುಮಾನಸ್ಪಾದವಾಗಿ ವಿಟ್ಲ ಪೇಟೆಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಮಂಗಳವಾರ ಮುಂಜಾನೆ ವಶಕ್ಕೆ ತೆಗೆದುಕೊಂಡಿದ್ದಾರೆ. ಕೇರಳದ ಬಾಯಾರು ನಿವಾಸಿ ಪದ್ಮನಾಭ (35) ಬಂಧಿತ ಆರೋಪಿ. ಈತ ಮಂಗಳವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ವೇಳೆ ಪೇಟೆಯಲ್ಲಿ ತಿರುಗಾಡುತ್ತಿದ್ದ. ಈ ಸಂದರ್ಭ ಪೇಟೆಯಲ್ಲಿ ಗಸ್ತು ತಿರುಗುತ್ತಿದ್ದ ವಿಟ್ಲ ಪೊಲೀಸ್ ಠಾಣೆಯ ಎಎಸಿಐ ಜಯರಾಜ್ ಆತನನ್ನು ನೋಡುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಬಳಿಕ ಆತನನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement