ಕಾಂಗ್ರೆಸ್ ಸರ್ಕಾರದ ಜಾತ್ಯತೀತತೆಗೆ 'ವಿದಾಯ' ವಿಶ್ವ ಹಿಂದೂಪರಿಷತ್, ಬಜರಂಗದಳ ಆರೋಪ
ಮಂಗಳೂರು: ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ನೀಡಲಾಗುವ ವಿದಾಯ್ ಹೆಸರಿನ ಶಾದಿ ಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರದ ಜಾತ್ಯತೀತತೆಗೆ ವಿದಾಯ ಹೇಳಿರುವುದಕ್ಕೆ ಸಾಕ್ಷಿ ಎಂದು ವಿಶ್ವ ಹಿಂದು ಪರಿಷತ್, ಬಜರಂಗದಳ ಆರೋಪಿಸಿದೆ.
ಸೆಕ್ಯುಲರ್ ಎಂದು ಬೊಬ್ಬೆ ಹಾಕುತ್ತಿದ್ದ ಕಾಂಗ್ರೆಸ್ ಇದೀಗ ಮುಸ್ಲಿಂ ಪರವಾಗಿ ಯೋಜನೆ ದಾರಿಗೆ ತಂದಿದೆ. ಇದು ಕಠೋರವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿರುವುದಕ್ಕೆ ಸಾಕ್ಷಿ ಎಂದ ವಿಹಿಂಪ ಸೇವಾ ಪ್ರಮುಖ್ ಡಾ.ಪಿ.ಅನಂತಕೃಷ್ಣ ಭಟ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಾಜದ ಪ್ರತಿ ಸಮುದಾಯದಲ್ಲಿ ಬಡವರಿದ್ದಾರೆ. ಹೀಗಿರುವಾಗ ಕೇವಲ ಮುಸ್ಲಿಂ ಹೆಣ್ಣುಮಕ್ಕಳಿಗೆವಿವಾಹ ಸಂದರ್ಭ ವಸ್ತಗಳ ಖರೀದಿಗೆ ಧನ ಸಹಾಯ ನೀಡುವುದು ರಾಜ್ಯಸರ್ಕಾರದ ಪಕ್ಷಪಾತಿ ಮತ್ತು ಓಟ್ ಬ್ಯಾಂಕ್ ರಾಜಕಾರಣವಾಗಿದೆ. ಧರ್ಮದ ಪರವಾಗಿ ಯೋಜನೆ ಜಾರಿ ಮಾಡಿದ ಸರ್ಕಾರ ವಿರುದ್ಧ ವಿಶ್ವ ಹಿಂದು ಪರಿಷತ್ ಕಾನೂನು ಹೋರಾಟ ಆರಂಭಿಸಲಿದೆ.
ವಿಹಿಂಪ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, ಸರ್ಕಾರಗಳು ಮುಸ್ಲಿಮರ ತುಷ್ಟಿಕರಣ ನಡೆಸುತ್ತಿದೆ. ಜನಸಾಮಾನ್ಯರಿಂದ ತೆರಿಗೆ ಹಣವನ್ನು ಪಡೆದ ಸರ್ಕಾರಗಳು ಓಟ್ ಬ್ಯಾಂಕ್ ರಾಜಕಾರಣಕ್ಕೆ ಇಚ್ಛೆ ಬಂದಂತೆ ಬಳಸುತ್ತಿದೆ. ಇಂಥ ಯೋಜನೆಗಳಿಂದ ಸಮಾಜ ಒಡೆಯುತ್ತದೆ ಎಂದರು.
ಗೋಸೇವೆ ಇಲ್ಲ: ಹಿಂದಿನ ಸರ್ಕಾರ ಗೋರಕ್ಷಣೆ ಮಸೂದೆ ಜಾರಿಗೆ ತಂದು ಗೋಸೇವಾ ಆಯೋಗ ಸ್ಥಾಪಿಸಿತ್ತು. ಮಸೂದೆ ಹಿಂದೆಗೆದುಕೊಂಡ ಸರ್ಕಾರ ಗೋಸೇವಾ ಆಯೋಗವನ್ನು ರದ್ದುಗೊಳಿಸಿದೆ. ಕೋರ್ಟ್ಗೆ ತೆರಳಿದ್ದರಿಂದ ಸರ್ಕಾರದ ನಿರ್ಧಾರವನ್ನು ರದ್ದು ಮಾಡಿದೆ ಎಂದು ಆಯೋಗದ ಅಧ್ಯಕ್ಷರೂ ಆಗಿರುವ ಎಂ.ಬಿ.ಪುರಾಣಿಕ್ ಹೇಳಿದರು. ಇದೀಗ ಸರ್ಕಾರ ನ್ಯಾಯಾಲಯದ ಅದೇಶ ಧಿಕ್ಕರಿಸಿ ಆಯೋಗಕ್ಕೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ಕಾಲುಬಾಯಿ ರೋಗದ ತಡೆ ಕಾರ್ಯಾಚರಣೆಯಲ್ಲಿ ಸಕ್ರಿಯ ಕಾರ್ಯ ನಿರ್ವಹಿಸಲು ಕಷ್ಟವಾಗಿದೆ. ಕಾಲುಬಾಯಿ ರೋಗದ ಬಗ್ಗೆ ಪಶು ಇಲಾಖೆಯೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದರೆ ರಾಜ್ಯದಲ್ಲಿರು ಗೋಸೇವೆ 6 ಸದಸ್ಯರು ಕಾಲುಬಾಯಿ ರೋಗ ತಡೆ ವಿರುದ್ಧ ಜಾಗೃತಿ ಕೆಲಸ ಮಾಡುತ್ತಿದ್ದಾರೆ ಎಂದರು.