ಜೈನಬಸದಿ ಕಳವು: ಆರೋಪಿಗೆ ಮಂಪರು ಪರೀಕ್ಷೆ ಇಲ್ಲ
ಮಂಗಳೂರು: ಜೈನಬಸದಿ ಸಿದ್ಧಾಂತ ಮಂದಿರದ ಅಮೂಲ್ಯ ವಿಗ್ರಹ ಕಳವು ಆರೋಪಿಗೆ ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಮೂಡುಬಿದರೆ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಈಗಾಗಲೇ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಇನ್ನು ಹೆಚ್ಚಿನ ತನಿಖೆಗೆಂದು ಮಂಪರು ಪರೀಕ್ಷೆ ನಡೆಸುವ ಅಗತ್ಯ ಇಲ್ಲ ಎಂದು ಆರೋಪಿ ಪರ ವಕೀಲ ಅರುಣ್ ಬಂಗೇರ ಮತ್ತು ನಾಗೇಶ್ ಶೆಟ್ಟಿ ವಾದ ಮಂಡಿಸಿದ್ದರು. ವಾದ ಪುರಸ್ಕರಿಸಿದ ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶರು ಈ ಸಂದರ್ಭದಲ್ಲಿ ಮಂಪರು ಪರೀಕ್ಷೆ ಅಗತ್ಯ ಇಲ್ಲ ಎಂದು ಆದೇಶಿಸಿದರು
ಕೊಡ್ಯಡ್ಕ ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದರೆ ಪೊಲೀಸರು ತನಿಖೆ ನಡೆಸುವ ವೇಳೆ ಆರೋಪಿ ಸಂತೋಷ್‌ದಾಸ್ ಯಾನೆ ಘನಶ್ಯಾಮ್ ದಾಸ್ ಸಹಕರಿಸಿರಲಿಲ್ಲ. ಆದ್ದರಿಂದ ಆರೋಪಿಗೆ ಮಂಪರು ಪರೀಕ್ಷೆ ಮಾಡಿಸಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಮೂಡುಬಿದರೆ ಇನ್‌ಸ್ಪೆಕ್ಟರ್ ಕೋರಿದ್ದರು. ರಾಜಕೀಯ ವ್ಯಕ್ತಿಗಳ ಕೈವಾಡ ಇರುವುದರಿಂದ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅನೇಕ ರಾಜ್ಯಗಳಿಗೆ ಸಂಬಂಧ ಪಟ್ಟಿರುವುದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜೈನ ಮಠಾಧೀಶರು ಆಗ್ರಹಿಸಿದ್ದರು.