ಜ್ಯುವೆಲ್ಲರಿಯಿಂದ ಸಾವಿರಾರು ಮೌಲ್ಯದ ಸೊತ್ತು ಕಳವು
ಪಡುಬಿದ್ರಿ: ಇಲ್ಲಿನ ಸುಮ ಕಾಂಪ್ಲೆಕ್ಸ್‌ನಲ್ಲಿರುವ ಜ್ಯುವೆಲ್ಲರಿಯೊಂದರಿಂದ ರು. 24,500 ಮೌಲ್ಯದ ವಸ್ತುಗಳನ್ನು ಕಳವುಗೈದ ಪ್ರಕರಣ ಮಂಗಳವಾರ ನಡೆದಿದೆ. ಜ್ಯುವೆಲ್ಲರಿಯ ಹಿಂಬದಿ ಬಾಗಿಲನ್ನು ಕಳ್ಳರು ಆಯುಧದಿಂದ ಮುರಿದು ಒಳ ಪ್ರವೇಶಿಸಿ ಶೋಕೆಸ್‌ನಲ್ಲಿದ್ದ ಬೆಳ್ಳಿಯ ರಾಧಕೃಷ್ಣ ದೇವರ ಮೂರ್ತಿ ಮತ್ತು ಸ್ಟ್ಯಾಂಡ್, ಬೆಳ್ಳಿಯ ನಾಣ್ಯಗಳು, ವಿವಿಧ ಮೂರ್ತಿಗಳು, ಬೆಳ್ಳಿಯ ಕೀ ಗೊಂಚಲುಗಳು ಮತ್ತು ಬೆಳ್ಳಿಯ ನಾಗನ ಹೆಡೆ, ಹಳೆಯ ಬೆಳ್ಳಿಯ ಸಾಮಗ್ರಿಗಳು ಮತ್ತು ನಗದು ರು. 1 ಸಾವಿರ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಮೇಶ್ ಆಚಾರ್ಯ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ವೃದ್ಧ ಆತ್ಮಹತ್ಯೆ
ಕಾರ್ಕಳ: ಮಾನಸಿಕವಾಗಿ ನೊಂದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಲ್ಯಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತರು ಅಣ್ಣು ನಾಯಕ್ (85) ಇವರಿಗೆ ಸುಮಾರು 2 ವರ್ಷಗಳಿಂದ ಸರಿಯಾಗಿ ಕಣ್ಣು ಕಾಣದೇ ಹೊರಗೆ ಎಲ್ಲೂ ಹೋಗಲಾಗದೆ ಮನೆಯಲ್ಲಿಯೇ ಇದ್ದು, ಇದರಿಂದ ಮಾನಸಿಕವಾಗಿ ನೊಂದು ಮನೆಯ ಬಚ್ಚಲು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರೇಮಾ ನೀಡಿದ ದೂರಿನಂತೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಗಾಯ
ಗಂಗೊಳ್ಳಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದು ಮಹಿಳೆ ಗಾಯಗೊಂಡ ಘಟನೆ ಇಲ್ಲಿನ ಮುಲ್ಲಿಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ. ಗಾಯಗೊಂಡವರನ್ನು ಗೀತಾ ಎಂದು ಗುರುತಿಸಲಾಗಿದೆ. ಇವರು ಮುಲ್ಲಿಕಟ್ಟೆ ಬಸ್ ನಿಲ್ದಾಣದಲ್ಲಿ ನಿಂತಿರುವಾಗ ತ್ರಾಸಿ ಕಡೆಯಿಂದ ಬಸನ್ನು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೀತಾ ಅವರಿಗೆ ಡಿಕ್ಕಿ ಹೊಡೆದು, ಬಸ್ಸನ್ನು ನಿಲ್ಲಿಸದೆ ಹೋಗಿದ್ದಾನೆ. ಈ ಬಗ್ಗೆ ಅಶೋಕ ಪೂಜಾರಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.