ರಸ್ತೆ ಬದಿ ವಾಹನ ನಿಲುಗಡೆ ಬೇಡ
ಮೂಲ್ಕಿ: ಕೆ.ಎಸ್. ರಾವ್ ನಗರದ ಬಿಜಾಪುರ ಕಾಲೋನಿಯಲ್ಲಿ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಆಗುತ್ತಿರುವ ಸಮಸ್ಯೆಗಳು, ನೆಮ್ಮದಿ ಕೇಂದ್ರದ ಅವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಮೂಲ್ಕಿ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಕೆ.ಎಸ್. ರಾವ್ ನಗರದ ಬಿಜಾಪುರ ಕಾಲೋನಿಯ ರಸ್ತೆ ಬದಿಯಲ್ಲಿ ಟೆಂಪೋ ಹಾಗೂ ಇತರ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಜನಸಾಮಾನ್ಯರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯೆ ವಿಮಲಾ ಪೂಜಾರಿ ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಈ ಬಗ್ಗೆ ಸಭೆಗೆ ಆಗಮಿಸಿದ ಮೂಲ್ಕಿ ಪೊಲೀಸ್ ಠಾಣೆ ನಿರೀಕ್ಷಕ ರಾಮಚಂದ್ರ ನಾಯಕ್ ಅವರಿಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು. ಅಲ್ಲದೆ, ಬಪ್ಪನಾಡು ಗ್ರಾಮದ ಕೊಳಚಿ ಕಂಬಳದಲ್ಲಿ ನದಿ ದಡದಲ್ಲಿ ರಾತ್ರಿ ಹೊತ್ತು ಹಲವರು ತಿರುಗುತ್ತಿದ್ದು, ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆಯೂ ಒತ್ತಾಯಿಸಿದರು.
ರಾತ್ರಿ ಗಸ್ತು ತಿರುಗುವುದಾಗಿ ಹಾಗೂ ಬಿಜಾಪುರ ಕಾಲೋನಿಯ ಪಾರ್ಕಿಂಗ್ ಸಮಸ್ಯೆ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳವುದಾಗಿ ಪೊಲೀಸ್ ಠಾಣೆ ನಿರೀಕ್ಷಕರು ತಿಳಿಸಿದರು.
ಸರತಿ ಸಾಲು ತಂದ ಸಮಸ್ಯೆ: ಮೂಲ್ಕಿ ನಾಡ ಕಚೇರಿಯಲ್ಲಿ ನೆಮ್ಮದಿ ಕೇಂದ್ರ ತೆರೆದಿದ್ದು ಸರತಿ ಸಾಲಿನಿಂದಾಗಿ ನಾಡಕಚೇರಿಗೆ ಆಗಮಿಸುವವರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ನೆಮ್ಮದಿ ಕೇಂದ್ರವನ್ನು ನಗರ ಪಂಚಾಯಿತಿ ಕಚೇರಿ ಬಳಿ ಸ್ಥಳಾಂತರಿಸುವಂತೆ ಸದಸ್ಯ ಪುತ್ತುಬಾವು ಒತ್ತಾಯಿಸಿದರು. ದರ್ಗಾರೋಡಿನ ಬಾವಿಯ ದುರಸ್ತಿ ಕಾರ್ಯ ಮಾಡುವಂತೆ ಅವರು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ನಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಬಾವಿಗಳನ್ನು ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಂತೆ ಸ್ಥಳಾಂತರಕ್ಕೆ ಸೂಚನೆ: ಕಾರ್ನಾಡಿನಲ್ಲಿ ಶನಿವಾರ ನಡೆಯುವ ಸಂತೆಗೆ ಜಾಗ ಇಕ್ಕಟ್ಟಾಗಿದ್ದು, ವಾಹನ ಪಾರ್ಕಿಂಗ್ ಸಮಸ್ಯೆಯಿದೆ. ಶನಿವಾರ ಸಂತೆಯನ್ನು ಕೂಡಲೆ ಗಾಂಧಿ ಮೈದಾನದ ಎದುರುಗಡೆ ಸ್ಥಳಾಂತರಿಸುವಂತೆ ಹಾಗೂ ಅದಕ್ಕೆ ಪೂರಕವಾಗಿ ಜಾಗ ಸಮತಟ್ಟು ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಮೂಲ್ಕಿ ಬಸ್ ನಿಲ್ದಾಣ ಸಮೀಪ ಆರಾರ್ ಟವರ್ ಬಳಿ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು ಕೂಡಲೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡುವಂತೆ ಸದಸ್ಯ ಬಿ.ಎಂ. ಆಸೀಫ್ ತಿಳಿಸಿದರು. ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದ ಸಮಸ್ಯೆಯಾಗಿದ್ದು ಕೂಡಲೆ ಸರಿಪಡಿಸುವುದಾಗಿ ಅಧಿಕಾರಿ ತಿಳಿಸಿದರು.
ಅಧ್ಯಕ್ಷತೆಯನ್ನು ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ವಹಿಸಿದ್ದರು. ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ಕಾರ್ಯ ಕಲಾಪ ನಡೆಸಿಕೊಟ್ಟರು. ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ವಂದಿಸಿದರು.