ಕ್ರೀಡಾಸಾಧಕರಿಗೆ ಆಳ್ವಾಸ್ ಏಕಲವ್ಯ, ಅಭಿಮನ್ಯು ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಸಾಧಕರಿಗೆ ಭಾನುವಾರ, ಮೂಡುಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರತಿಷ್ಠಿತ ಆಳ್ವಾಸ್ ಏಕಲವ್ಯ ಹಾಗೂ ಆಳ್ವಾಸ್ ಅಭಿಮನ್ಯು ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್ಗಳಾದ ಸುನಿಲ್ ಕುಮಾರ್ ಶೆಟ್ಟಿ, ಬಾಬು ಶೆಟ್ಟಿ ಮತ್ತು ರಾಷ್ಟ್ರೀಯ ಅಥ್ಲೆಟಿಕ್ಸ್ ಕೋಚ್ ಗೋವಿಂದ್ರಾಯ್ ವೆಂಕಣ್ಣ ಗಾಂವ್ಕರ್ಗೆ ಆಳ್ವಾಸ್ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಮಟ್ಟದ ಡೆಕಥ್ಲಾನ್ಪಚು ಅಭಿಷೇಕ್ ಶೆಟ್ಟಿ, ಅಂತಾರಾಷ್ಟ್ರೀಯ ಶಾಟ್ಪುಟ್ ಸ್ಪರ್ಧಾಳು ನಮಿತಾ ಜಿ.ಕೆ, ರಾಷ್ಟ್ರೀಯ ಖೋಖೋಪಟು ಪ್ರದೀಪ್ ಕೆ.ಸಿ, ರಾಷ್ಟ್ರೀಯ ಥ್ರೋಬಾಲ್ಪಟು ಕೀರ್ತಿ ಅವರಿಗೆ ಆಳ್ವಾಸ್ ಅಭಿಮನ್ಯು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯುವ ಸಬಲೀಕರಣ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಲ್ಟಿಜಿಮ್ ಉದ್ಘಾಟನೆಯ ಬಳಿಕ ನಡೆದ ಸಮಾರಂಭದಲ್ಲಿ ಕ್ರೀಡಾ ಹಾಗೂ ಮೀನುಗಾರಿಕಾ ಖಾತೆ ಸಚಿವ ಅಭಯಚಂದ್ರ ಜೈನ್, ಅರಣ್ಯ ಹಾಗೂ ಪರಿಸರ ಖಾತೆ ಸಚಿವ ರಮಾನಾಥ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಇದ್ದರು.
ಕ್ರೀಡಾ ಸಾಧಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಅಭಯಚಂದ್ರ ಜೈನ್, ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಇಂತಹಾ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ. ಇದು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ, ಇತ್ತೀಚಿನ ವರ್ಷದಲ್ಲಿ ಮೂಡುಬಿದಿರೆ ಕ್ರೀಡೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ ಮಾತ್ರವಲ್ಲದೆ ಕಳಂಕರಹಿತ ಸಾಧನೆ ಮಾಡಿದೆ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಹೇಳಿದರು.
ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಜಯ ಪ್ರಕಾಶ್ ಧನ್ಯವಾದ ಸಮರ್ಪಿಸಿದರು.