ಜೀವನ ಸಂಸ್ಕಾರಕ್ಕೆ ಮಾತೃಭಾಷೆ ಶಿಕ್ಷಣ: ವಸಂತ ಕುಮಾರ್
ಮಂಗಳೂರು: ಸಾಹಿತ್ಯ ಸಂಸ್ಕೃತಿ ಮರೆತ ಜನತೆ ಅರ್ಥ ಸಂಸ್ಕೃತಿಯ ವೈಭವೀಕರಣಕ್ಕೆ ಮರುಳಾಗಿದ್ದಾರೆ. ಸಾಹಿತ್ಯ ಸಂಸ್ಕೃತಿ ಮರುಕಳಿಸಿದರೆ ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ವಿಭಾಗ ಮುಖ್ಯಸ್ಥ ಡಾ.ವಸಂತ ಕುಮಾರ್ ಪೆರ್ಲ ಹೇಳಿದ್ದಾರೆ.
ನಗರದ ಶಾರದಾ ವಿದ್ಯಾಲಯದಲ್ಲಿ ಭಾನುವಾರ ದ.ಕ.ಜಿಲ್ಲಾ ಸಾಹಿತ್ಯ ಸಂಗಮ ಆಶ್ರಯದಲ್ಲಿ ನಡೆದ 20ನೇ ವರ್ಷದ 'ಮಕ್ಕಳ ಧ್ವನಿ-2013' ಸಮಾರೋಪದಲ್ಲಿ ಮಾತನಾಡಿದರು.
ಕರಾವಳಿ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ರ್ಯಾಂಕ್‌ಗಳಿಕೆ, ವೃತ್ತಿ ಶಿಕ್ಷಣ ಧಾವಂತದಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಕ್ಷೀಣಿಸುತ್ತಿದೆ. ಅಕ್ಷರ ಕಲಿತರೆ ಸಾಲದು, ಹೃದಯವಂತರಾಗುವುದು ಮುಖ್ಯ. ವಿದ್ಯಾರ್ಥಿ ದಿಶೆಯಲ್ಲಿ ಉತ್ತಮ ಸಂಸ್ಕಾರ ಸಿಕ್ಕಿದಾಗ ವ್ಯಕ್ತಿತ್ವ ಜಾಗೃತವಾಗುತ್ತದೆ ಎಂದರು. ಮಾತೃಭಾಷೆ ಜೀವನದಲ್ಲಿ ಸಂಸ್ಕಾರ ರೂಪಿಸಲು ಬೇಕು. ಅಧ್ಯಾಪಕರು ಮಕ್ಕಳಲ್ಲಿನ ಉಚ್ಚಾರವನ್ನು ತಿದ್ದುವಲ್ಲಿ ಗಮನಹರಿಸಬೇಕು. ಶಿಕ್ಷಣ ಸಂಸ್ಥೆಗಳು ವರ್ಷಕ್ಕೊಮ್ಮೆ ಮಕ್ಕಳ ಸಾಹಿತ್ಯ ಪ್ರೋತ್ಸಾಹಿಸುವ ಕಾರ್ಯಕ್ರಮ ಆಯೋಜಿಸಬೇಕು. ಸಾಹಿತ್ಯ ಸಂಘಟನೆಗಳು ವರ್ಷಕ್ಕೊಮ್ಮೆಯಾದರೂ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮಾವೇಶ ನಡೆಸಬೇಕು ಎಂದರು. ಸಮ್ಮೇಳನಾಧ್ಯಕ್ಷೆ ಕಟೀಲು ಕಾಲೇಜು ವಿದ್ಯಾರ್ಥಿನಿ ಅನುಜ್ಞಾ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಸಂಸ್ಥೆ ಅಧ್ಯಕ್ಷ ಎಂ.ಬಿ.ಪುರಾಣಿಕ್, ಪಿಯು ಕಾಲೇಜು ಪ್ರಾಂಶುಪಾಲೆ ಲೀಲಾ ಉಪಾಧ್ಯಾಯ, ಕಾಲೇಜು ಪ್ರಾಂಶುಪಾಲೆ ಸುನೀತ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಾಹಿತ್ಯ ಸಂಗಮ ಅಧ್ಯಕ್ಷ ಅನಂತ ಪದ್ಮನಾಭ ರಾವ್, ಕಾರ್ಯದರ್ಶಿ ಶ್ರೀನಿವಾಸ ರಾವ್ ಇದ್ದರು. ಮಕ್ಕಳ ಸಾಹಿತ್ಯ ಚಟುವಟಿಕೆಗೆ ಶ್ರಮಿಸಿದ ಜಿ.ಯು.ನಾಯಕ್, ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಪಡೆದ ಕೋಚ ವಿವೇಕ ಪ್ರೌಢ ಶಾಲೆಯ ಮಹಿಮಾರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಸಾಹಿತ್ಯ ಸಂಗಮದ ಐವರು ಅಧ್ಯಕ್ಷರನ್ನು ಪುರಸ್ಕರಿಸಲಾಯಿತು.