ದೇಶದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಕಾರಣ
ಮಂಗಳೂರು: ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಪ್ರಧಾನಿ ಮನಮೋಹನ ಸಿಂಗ್, ವಿತ್ತ ಮಂತ್ರಿ ಚಿದಂಬರಂ ಮತ್ತು ಯೋಜನಾ ಆಯೋಗ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಕಾರಣ. ಬೆಲೆ ಏರಿಕೆಯಿಂದ ಮಧ್ಯಮ ಮತ್ತು ಕೆಳವರ್ಗದ ಜನತೆ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದೆ. ದೇಶದ ಭವಿಷ್ಯದ ಇಂಥ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಚರ್ಚೆ ನಡೆಸುವಂತಾಗಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಎನ್.ರವಿ ಕುಮಾರ್ ಹೇಳಿದ್ದಾರೆ.
ಭಾನುವಾರ ನಗರದ ಸಂಘನಿಕೇತನದಲ್ಲಿ ಮಂಗಳೂರು ವಿಭಾಗ ಅಭಾವಿಪ ಕಾಲೇಜು ಸಮಿತಿ ಮತ್ತು ಅಧ್ಯಕ್ಷ, ಕಾರ್ಯದರ್ಶಿಗಳ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಬುದ್ಧಿಜೀವಿಗಳ ಪ್ರಕಾರ ಧರ್ಮವಿಲ್ಲದೆ ನಡೆಯುವುದು ಸೆಕ್ಯೂಲರಿಸಂ ಎನಿಸುತ್ತದೆ. ವಿದ್ಯಾರ್ಥಿಗಳಲ್ಲಿ ಧರ್ಮ ನಿರಪೇಕ್ಷತೆ ಸೃಷ್ಟಿಸದೆ ದೇಶಭಕ್ತಿ, ಧರ್ಮದ ಸಾರ, ಜೀವನಮೌಲ್ಯ ಮೂಡಿಸಬೇಕು ಎಂದರು.
ಸಮಾವೇಶ ಉದ್ಘಾಟಿಸಿದ ಉಡುಪಿ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನ ಸಂಚಾಲಕ ಡಾ.ರವೀಂದ್ರನಾಥ ಶಾನುಭಾಗ್, ಉನ್ನತ ಶಿಕ್ಷಣ ಕಲಿತವರಿಂದಲೇ ಮಾಫಿಯಾ ಪ್ರಾರಂಭವಾಗಿದ್ದು, ಇದು ದೇಶದ ಅರಾಜಕತೆಗೆ ಕಾರಣವಾಗಿದೆ. ರು. 29 ಕೋಟಿಯಿಂದ ಪ್ರಾರಂಭವಾದ ವರಾಹಿ ಯೋಜನೆ ಈಗ ರು. 500 ಕೋಟಿಗೆ ತಲುಪಿದರೂ ಯೋಜನೆ ಪೂರ್ತಿಯಾಗಿಲ್ಲ. ಯೋಜನೆ ಪೂರ್ಣಗೊಳ್ಳಲು ರು. 1,250 ಕೋಟಿ ಅಗತ್ಯವಿದೆ ಎನ್ನುವಾಗ ಅಧಿಕಾರಿಗಳು ಹಾಗೂ ಯೋಜನೆಯ ಮರ್ಮ ತಿಳಿಯಬಹುದು ಎಂದರು.
ಅಭಾವಿಪ ಜಿಲ್ಲಾ ಪ್ರಮುಖ್ ಕೇಶವ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ನಗರ ಕಾರ್ಯದರ್ಶಿ ಚೇತನ್, ರಾಜ್ಯ ಕಾರ್ಯದರ್ಶಿ ರಮೇಶ್, ನಗರ ಅಧ್ಯಕ್ಷ ಬಾಲಕೃಷ್ಣ, ಶ್ಯಾಮ ಪ್ರಸಾದ್ ಇದ್ದರು.