ಸಾಲ ಮನ್ನಾ, ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ- 5ರ ನಂತರ ಉಗ್ರ ಪ್ರತಿಭಟನೆ: ಡೀವಿ
ಬೆಳಂಗಡಿ: ಅಡಕೆ ಬೆಳೆಗಾರರ ಸಾಲ ಮನ್ನಾ ಹಾಗೂ ಅವರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸದಿದ್ದರೆ ಸೆ. 5 ರ ಬಳಿಕ ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಎಚ್ಚರಿಸಿದ್ದಾರೆ.
ಅವರು ಬೆಳ್ತಂಗಡಿ ಸಮೀಪದ ಕೊಳೆರೋಗ ಪೀಡಿತ ಅಡಕೆ ತೋಟಗಳನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ವತಿಯಿಂದ ಸಮಿತಿಯೊಂದನ್ನು ರಚಿಸಿ ಕೆಳಮಟ್ಟದಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಈಗಾಗಲೇ ಒಂದು ವರದಿಯನ್ನು ಸರ್ಕಾರಕ್ಕೆ ನೀಡಿದೆ. ಸರ್ಕಾರ ಇನ್ನಾದರು ಕಣ್ಣು ತೆರೆಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಚಿವರು ಬೆಂಗಳೂರಿನಲ್ಲಿ ಕುಳಿತು ಕೊಳೆರೋಗದ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಸಚಿವರು ಅಡಕೆ ತೋಟಗಳಿಗೆ ಬರಲಿ. ಅಲ್ಲಿನ ವಾಸ್ತವಿಕತೆಗಳನ್ನು ಅರಿತುಕೊಂಡು ಅವರ ನೆರವಿಗೆ ಸಿದ್ಧವಾಗಲಿ ಎಂದು ಹೇಳಿದರು. ಪರಿಶೀಲನಾ ಹಂತದಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಸಂಜೀವ ಮಠಂದೂರು, ಪ್ರಭಾಕರ ಬಂಗೇರ, ರಂಜನ್ ಗೌಡ, ಧನಲಕ್ಷ್ಮಿ, ತುಳಸಿಹಾರಬೆ, ಬಾಲಕೃಷ್ಣ ಶೆಟ್ಟಿ, ಭರತ್ ಇದ್ದರು.