ಅನ್ನಭಾಗ್ಯ ಅರೆ ಬೆಂದ ಯೋಜನೆ: ಸಿಪಿಎಂ ಟೀಕೆ
ಮಂಗಳೂರು: ' 1 ಕ್ಕೆ 30 ಕೆ.ಜಿ. ಅಕ್ಕಿ ನೀಡಿ ಉಳಿದ ವಸ್ತುಗಳ ವಿತರಣೆ ನಿಲ್ಲಿಸಲಾಗಿದೆ. ಈ ಮೂಲಕ ಅನ್ನಭಾಗ್ಯ ಅರೆಬೆಂದ ಯೋಜನೆಯಾಗಿ ಮಾರ್ಪಟ್ಟಿದೆ' ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ ಹೇಳಿದ್ದಾರೆ. ಪಡಿತರ ಅವ್ಯವಸ್ಥೆ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯೆದುರು ಸೋಮವಾರ ನಡೆದ ಪ್ರತಿಭಟನೆ ಪ್ರದರ್ಶನ ಸಭೆಯಲ್ಲಿ ಮಾತನಾಡಿದರು.
ಜನರಿಗೆ ಬದುಕಲು ಕೇವಲ ಅಕ್ಕಿ ಮಾತ್ರ ಸಾಕಾಗುವುದಿಲ್ಲ, ಇದರ ಜತೆಗೆ ಬೇಳೆ ಕಾಳುಗಳು ಬೇಕಾಗುತ್ತದೆ. ಬಿಪಿಎಲ್ನವರಿಗೆ 30 ಕೆ.ಜಿ. ಅಕ್ಕಿ ನೀಡಿದ ನಂತರ ಎಪಿಎಲ್ ಕುಟುಂಬಗಳಿಗೆ ಈ ತನಕ ಸಿಗುತ್ತಿದ್ದ ರಿಯಾಯಿತಿ ದರದ ಅಕ್ಕಿ ವಿತರಣೆ ನಿಲ್ಲಿಸಲಾಗಿದೆ. ಸೀಮೆಎಣ್ಣೆ, ಸಕ್ಕರೆ ವಿತರಣೆ ಕೂಡ ನಿಂತು ಹೋಗಿದೆ. ಈಗಾಗಲೇ ಸಾವಿರಾರು ಬಡವರು ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾಗಿದ್ದಾರೆ ಎಂದರು. ಪಡಿತರ ಕಾರ್ಡಿನಲ್ಲಿಯೇ ಅವ್ಯವಸ್ಥೆಯಿದ್ದು, ಇದನ್ನು ಇನ್ನೂ ಸರಿಪಡಿಸಲು ಸರ್ಕಾರ ಸಾಧ್ಯವಾಗಿಲ್ಲ. ಗೊಂದಲಮಯ ದಿನಕ್ಕೊಂದು ಕಾನೂನು ತರುತ್ತಿದ್ದಾರೆ. ತಮಿಳುನಾಡಿನಲ್ಲಿ 20 ಕೆ.ಜಿ. ಅಕ್ಕಿ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ. ಆದ್ದರಿಂದ ಪಡಿತರ ಚೀಟಿಯಲ್ಲಿನ ಅವೈಜ್ಞಾನಿಕ ಪದ್ಧತಿ ಕೈಬಿಟ್ಟು, ಎಲ್ಲ ಕುಟುಂಬಗಳಿಗೂ ಒಂದೇ ಕಾರ್ಡ್ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.