ಅಲ್ಪಾವಧಿ ತಾಂತ್ರಿಕ ಶಿಕ್ಷಣ ಪ್ರೋತ್ಸಾಹ: ದೇಶಪಾಂಡೆ
ಮಂಗಳೂರು: 'ಅಲ್ಪಾವಧಿಯ ತಾಂತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಸೋಮವಾರ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದೀರ್ಘಾವಧಿಯ ತಾಂತ್ರಿಕ ಶಿಕ್ಷಣ ಪೂರೈಸಲು ವಿದ್ಯಾರ್ಥಿಗಳು ಹಿಂಜರಿಯುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಅಲ್ಪಾವಧಿ ತಾಂತ್ರಿಕ ಕೋರ್ಸು ಆರಂಭಿಸಲು ಹೊಸ ಆಯಾಮ, ಚಿಂತನೆ ನಡೆಸುತ್ತಿದೆ. ಜಾಗತೀಕರಣದಿಂದಾಗಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಸ್ಪರ್ಧೆ ಹಾಗೂ ಸ್ಪರ್ಧಾತ್ಮಕ ವಾತಾವರಣ ಎದುರಿಸಲು ಸಿದ್ಧವಾಗಬೇಕು ಎಂದರು.
ಆರ್ಥಿಕ ಸ್ಥಿತಿಯಲ್ಲಿ ಏರಿಳಿತಗಳು ಸಾಮಾನ್ಯವಾಗಿದ್ದು, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಕಂಡುಬಂದರೂ ಯುವ ಪೀಳಿಗೆಗೆ ಉತ್ತಮ ಭವಿಷ್ಯವಿದೆ. ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ರು. 5 ಕೋಟಿ ಅನುದಾನ ನೀಡಲು ನಿರ್ಧರಿಸಲಾಗಿದೆ' ಎಂದರು.
ಉನ್ನತ ಶಿಕ್ಷಣ ಪಡೆಯುವ ಆರ್ಥಿಕವಾಗಿ ಹಿಂದುಳಿದ ಕೊಂಕಣಿ ಭಾಷಿಕ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು ರು. 2.5 ಕೋಟಿ ಮೊತ್ತ ವಿದ್ಯಾರ್ಥಿ ವೇತನ ನೀಡಲಾಯಿತು. ರು. 1ಲಕ್ಷ ಮೊತ್ತದ ವಿದೇಶ ವ್ಯಾಸಂಗ ಯೋಜನೆಯಲ್ಲಿ ಒಟ್ಟು 5 ವಿದ್ಯಾರ್ಥಿಗಳು ವೇತನಕ್ಕೆ ಆಯ್ಕೆಯಾಗಿದ್ದಾರೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಜೆ.ಆರ್. ಲೋಬೋ, ಮಣಿಪಾಲ ಗ್ಲೋಬಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಟಿ.ವಿ. ಮೋಹನ್ದಾಸ್ ಪೈ, ಪೋಷಕ ಅಣ್ಣಪ್ಪ ಕಾಮತ್ ಹಾಜರಿದ್ದರು.